ದೇವನಹಳ್ಳಿ:ವಿಮಾನದ ಶೌಚಾಲಯದ ವಾಶ್ ಬೇಸಿನ್ನಲ್ಲಿ ಅಡಗಿಸಿ ಇಟ್ಟು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣವನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಆಕ್ಟೋಬರ್ 7ರಂದು ಮಾಲ್ಡಿವ್ಸ್ನ ಮಾಲೆಯಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನದ ಶೌಚಾಲಯದಲ್ಲಿ ಅಕ್ರಮವಾಗಿ ಸಾಗಿಸಲು ಬಚ್ಚಿಡಲಾಗಿದ್ದ ಚಿನ್ನ ಪತ್ತೆ ಮಾಡಲಾಗಿದೆ. 3.2 ಕೆಜಿ ತೂಕದ 1.8 ಕೋಟಿ ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ವಿಮಾನವನ್ನು ತಪಾಸಣೆ ನಡೆಸಿದಾಗ ವಿಮಾನದ ಶೌಚಾಲಯದ ವಾಶ್ ಬೆಸಿನ್ನಲ್ಲಿ ಅಡಗಿಸಿ ಇಟ್ಟಿದ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ ಚಿನ್ನದ ತುಂಡುಗಳು ಸಿಕ್ಕಿವೆ.
ಕಳ್ಳಸಾಗಣೆದಾರರು ಚಿನ್ನವನ್ನ ವಾಶ್ ಬೆಸಿನ್ನಲ್ಲಿ ಇಟ್ಟಿದ್ದಾರೆ. ವಿದೇಶದಿಂದ ಈ ವಿಮಾನದ ಮೂಲಕ ದೇಶೀಯ ಮಾರ್ಗದಲ್ಲಿ ಸಂಚಾರಿಸುತ್ತಾರೆ. ಇದೇ ವಿಮಾನದಲ್ಲಿ ಬೇರೊಂದು ಸ್ಥಳಕ್ಕೆ ಹೋಗುವ ಪ್ರಯಾಣಿಕ ಅಲ್ಲಿಂದ ಚಿನ್ನವನ್ನ ತೆಗೆದುಕೊಂಡ ಹೋಗುವ ಸಾಧ್ಯತೆ ಇತ್ತು. ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದವನ ಪತ್ತೆ ಮಾಡುವ ಕಾರ್ಯವನ್ನು ಕಸ್ಟಮ್ಸ್ ಅಧಿಕಾರಿಗಳು ಪ್ರಾರಂಭಿಸಿದ್ದಾರೆ.