ಬೆಂಗಳೂರು: ಪೊಲೀಸರು ತನಿಖೆ ಸಂದರ್ಭದಲ್ಲಿ ಅಪರಾಧಿಗಳಿಂದ ಜಪ್ತಿ ಮಾಡಿದ ಚಿನ್ನಾಭರಣಗಳನ್ನು 15 ದಿನದಿಂದ ಗರಿಷ್ಠ ಒಂದು ತಿಂಗಳವರಗೆ ಮಾತ್ರ ಪೊಲೀಸರ ವಶದಲ್ಲಿ ಇಟ್ಟುಕೊಳ್ಳಲು ಅವಕಾಶವಿದ್ದು, ನಂತರ ಸಂತ್ರಸ್ತ ಅಥವಾ ದೂರುದಾರರಿಗೆ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರಿನ ಚಿನ್ನಾಭರಣದ ಮಳಿಗೆಯೊಂದರ ಮಾಲೀಕ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಅವರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಮೈಸೂರಿನ ಲಷ್ಕರ್ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.
ಅಲ್ಲದೆ, ತನಿಖೆ ಸಂದರ್ಭದಲ್ಲಿ ಜಪ್ತಿ ಮಾಡಿದ ಚಿನ್ನ, ಬೆಳ್ಳಿ ಮತ್ತು ಅಮೂಲ್ಯ ರತ್ನಗಳನ್ನು ಪ್ರಕರಣದ ವಿಚಾರಣೆ ಪೂರ್ಣಗೊಳ್ಳುವವರೆಗೂ ಪೊಲೀಸರ ವಶದಲ್ಲಿ ವರ್ಷಾನುಗಟ್ಟಲೆ ಇಟ್ಟುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸುಪ್ರೀಂಕೋರ್ಟ್ ತೀರ್ಪು ಪ್ರಕಾರ ವಶಪಡಿಸಿಕೊಂಡ ವಸ್ತುಗಳು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ 15 ದಿನಗಳಿಂದ ಒಂದು ತಿಂಗಳವರೆ ಮಾತ್ರ ಇರುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಲಯ ನೋಡಿಕೊಳ್ಳಬೇಕು. ಜಪ್ತಿ ಮಾಡಿದ ಚಿನ್ನಾಭರಣಗಳನ್ನು ಸಂಬಂಧಪಟ್ಟ ದುರುದಾರರ ಹಾಗೂ ಸಂತ್ರಸ್ತರ ಮಧ್ಯಂತರ ಸುಪರ್ದಿಗೆ ನೀಡುವ ಸಂಬಂಧ ಮ್ಯಾಜಿಸ್ಟ್ರೇಟ್ ಕೋರ್ಟ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಆದೇಶಿಸಿದೆ.
ಜೊತೆಗೆ, ಪ್ರಕರಣದಲ್ಲಿ ವಶಪಡಿಸಿಕೊಂಡ ವಸ್ತುಗಳು ದೂರುದಾರರು - ಸಂತ್ರಸ್ತರಿಗೆ ನೀಡುವ ಮುನ್ನ ಅವುಗಳ ಪೋಟೋ ತೆಗೆದುಕೊಂಡು ಸಮಗ್ರವಾದ ಪಂಚನಾಮೆ ಮಾಡಬೇಕು. ವಿಚಾರಣೆ ವೇಳೆ ಅವುಗಳನ್ನು ಹಾಜರುಪಡಿಸಬೇಕು ಎಂಬುದಾಗಿ ವಸ್ತುಗಳನ್ನು ಸುಪರ್ದಿಗೆ ಪಡೆಯುವವರಿಂದ ಬಾಂಡ್ ಬರೆಸಿಕೊಳ್ಳಬೇಕು ಹಾಗೂ ಭದ್ರತಾ ಖಾತರಿ ಪಡೆದುಕೊಳ್ಳಬೇಕು.