ಕರ್ನಾಟಕ

karnataka

ETV Bharat / state

ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅಗಲಿಕೆಗೆ ಯಾರ್‌ ಯಾರ್‌ ಏನೇನೆಂದರು...

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ವಿಧಿವಶರಾದ ಹಿನ್ನೆಲೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅಗಲಿಕೆಗೆ ಗಣ್ಯರ ಸಂತಾಪ

By

Published : Jun 10, 2019, 12:01 PM IST


ಬೆಂಗಳೂರು:ಇಂದು ನಿಧನರಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್ ಕಾರ್ನಾಡ್ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅಗಲಿಕೆಗೆ ಗಣ್ಯರ ಸಂತಾಪ

ಕಾರ್ನಾಡ್‌ ನಾಡಿನ ಬಹುಮುಖ್ಯ ಸಾಕ್ಷಿ- ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಹಿರಿಯ ಸಾಹಿತಿ,ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ನಾಡಿನ ಬಹುಮುಖ್ಯ ಸಾಕ್ಷಿ ಪ್ರಜ್ಞೆಯ ದನಿ ಮೌನವಾದಂತಾಗಿದೆ. ಇನ್ನಷ್ಟು ಕಾಲ ಅವರು ನಮ್ಮೊಡನೆ ಇರಬೇಕಿತ್ತು. ಅವರ ಸಾವಿನ ಶೋಕದಲ್ಲಿ ನಾನು ಭಾಗಿಯಾಗಿದ್ದೇನೆ ಎಂದಿದ್ದಾರೆ.

ನಾಟಕಲೋಕಕ್ಕೆ ತುಂಬಲಾರದ ನಷ್ಟ - ಡಿಸಿಎಂ

ಡಾ.ಜಿ. ಪರಮೇಶ್ವರ್ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದು,ದೇಶ ಕಂಡ ಅತ್ಯುತ್ತಮ ರಂಗಕರ್ಮಿ ಹಾಗೂ ಬರಹಗಾರರಲ್ಲೊಬ್ಬರಾದ ಜ್ಞಾನಪೀಠ ಪುರಸ್ಕೃತ ಶ್ರೀ ಗಿರೀಶ್ ಕಾರ್ನಾಡ್ ಅವರ ಅಗಲಿಕೆಯ ವಿಚಾರ ತಿಳಿದು ದಿಗ್ಭ್ರಮೆಯಾಗಿದೆ. ಕನ್ನಡ ಮತ್ತು ಭಾರತ ಸಾಹಿತ್ಯ ಹಾಗೂ ನಾಟಕ ಲೋಕಕ್ಕೆ ಇದು ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿ ದೊರೆಯಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕಾರ್ನಾಡ್ ಅಗಲಿಕೆ ಆಘಾತಕಾರಿ- ರಾಜ್ಯ ಕಾಂಗ್ರೆಸ್

ರಾಜ್ಯ ಕಾಂಗ್ರೆಸ್ ಪಕ್ಷ ಕಾರ್ನಾಡ್​​ಗೆ ಅಗಲಿಕೆಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಸಂತಾಪ ಸೂಚಿಸಲಾಗಿದೆ. ನಟ,ಸಾಹಿತಿ,ಚಿಂತಕ, ಪ್ರಗತಿಪರ ಹೋರಾಟಗಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಅಗಲಿಕೆ ಆಘಾತಕಾರಿ ಸುದ್ದಿ. ಸಾಹಿತ್ಯ ಲೋಕಕ್ಕೆ, ಕರ್ನಾಟಕಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಅವರ ಕುಟುಂಬದವರಿಗೆ ಬಂಧು ಮಿತ್ರರಿಗೆ ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಲಾಗಿದೆ.

ದುಃಖ ಭರಿಸುವ ಶಕ್ತಿ ದೇವರು ನೀಡಲಿ-ಗುಂಡೂರಾವ್
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಮ್ಮ ಟ್ವೀಟ್​ ಮಾಡಿದ್ದು, ಕನ್ನಡದ ಹೆಸರಾಂತ ಲೇಖಕ, ರಂಗಭೂಮಿ ತಜ್ಞ, ನಾಟಕಕಾರ, ಪ್ರಖರ ವಿಚಾರವಾದಿ, ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪದ್ಮಶ್ರೀ ಗಿರೀಶ್ ಕಾರ್ನಾಡ್ ಅವರ ನಿಧನ ರಾಜ್ಯದ ಸಾಹಿತ್ಯ, ಸಾಂಸ್ಕೃತಿಕ, ಪ್ರಗತಿಪರ ವಲಯಕ್ಕೆ ತುಂಬಲಾರದ ನಷ್ಟ. ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ದುಃಖ ಭರಿಸುವ ಶಕ್ತಿ ಲಭಿಸಲಿ ಎಂದು ತಿಳಿಸಿದ್ದಾರೆ.

ಕಾರ್ನಾಡ್ ನಿಧನಕ್ಕೆ ಡಿಕೆಶಿ ಸಂತಾಪ
ಪ್ರಗತಿಪರ ಚಿಂತಕ, ಸಾಹಿತಿ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದು ತಮ್ಮ ಸಂದೇಶದಲ್ಲಿ ಅವರು, ಕಾರ್ನಾಡ್ ಅವರು ಸಾಹಿತ್ಯ, ನಾಟಕ ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಸ್ಮರಿಸಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದ ಸಾಹಿತಿ, ಪ್ರಗತಿಪರ ಚಿಂತಕ ಗಿರೀಶ್ ಕಾರ್ನಾಡ್ ಅವರು ಇಂದು ವಿಧಿವಶರಾಗಿದ್ದಾರೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಅವರ ಆಲೋಚನೆಗಳು, ಚಿಂತನೆಗಳು ನಮ್ಮ ಸಮಾಜಕ್ಕೆ ಅಗತ್ಯವಾಗಿದ್ದವು. ಸಾಹಿತ್ಯ, ನಾಟಕ, ಚಲನಚಿತ್ರ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕಾರ್ನಾಡರು, ಈ ಮೂರು ರಂಗಗಳಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಬರೆದ ಸಾಹಿತ್ಯಗಳು, ರಚಿಸಿದ ನಾಟಕಗಳು, ನಿರ್ದೇಶನ ಹಾಗೂ ನಟನೆಯ ಚಿತ್ರಗಳು ನಮ್ಮ ಸಮಾಜದಲ್ಲಿನ ಕೆಟ್ಟ, ಮೂಢ ಪದ್ಧತಿಗಳ ವಿರುದ್ಧದ ದನಿಯಾಗಿದ್ದವು. ಇತಿಹಾಸ ಹಾಗೂ ಕಲ್ಪನಿಕ ಕಥೆಗಳ ಜತೆಗೆ ಸಮಾಜದ ಪ್ರಸ್ತುತ ಪರಿಸ್ಥಿತಿಯನ್ನು ಆಧರಿಸಿ ಅವರು ಬರೆಯುತ್ತಿದ್ದ ನಾಟಕಗಳು ಹೆಚ್ಚು ಖ್ಯಾತಿ ಪಡೆದಿದ್ದವು. ಎಷ್ಟರ ಮಟ್ಟಿಗೆ ಎಂದರೆ ಇವರ ಅನೇಕ ನಾಟಕಗಳು ಬೇರೆ ಭಾಷೆಗಳಿಗೆ ಭಾಷಾಂತರವಾಗಿವೆ’ ಎಂದು ವಿವರಿಸಿದ್ದಾರೆ.

ಪ್ರಿಯಂಕ್ ಖರ್ಗೆ ಕಂಬನಿ

ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ನಿಧನಕ್ಕೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಸಂತಾಪ ಸೂಚಿಸಿದ್ದಾರೆ. ಗಿರೀಶ್ ಕಾರ್ನಾಡ್ ರಾಜ್ಯಕ್ಕಷ್ಟೇ ಅಲ್ಲ ದೇಶದಲ್ಲಿ ಹಿರಿಯ ಸಾಹಿತಿ. ಕಾರ್ನಾಡ್ ಪ್ರಗತಿ ಪರ ಚಿಂತಕ. ಅವರ ನಿಧನ ನಮಗೆಲ್ಲ ತುಂಬಲಾರದ ನಷ್ಟ. ಗಿರೀಶ್ ಕಾರ್ನಾಡ್ ಅವರು ಸಾಹಿತ್ಯಕ್ಕೆ ಅಪಾರ ಕೊಡುಗೆ ಕೊಟ್ಟಿದ್ದಾರೆ. ಜ್ಞಾನಪೀಠ, ಪದ್ಮಭೂಷಣ,ಪದ್ಮಶ್ರೀ ಕೂಡ ಕಾರ್ನಾಡ್ ಅವರಿಗೆ ಸಿಕ್ಕಿತ್ತು. ಹಿರಿಯ ಚಿಂತಕರನ್ನ ಕಳೆದುಕೊಂಡಿದ್ದು ತುಂಬಲಾರದ ನಷ್ಟ. ಪ್ರಸ್ತುತ ವಾತಾವರಣದಲ್ಲಿ ಅವರ ನಡೆ ನುಡಿ ಅಗತ್ಯವಿತ್ತು ಎಂದಿದ್ದಾರೆ.

ಕೆ.ಎಸ್.ಈಶ್ವರಪ್ಪ ಸಂತಾಪ
ನಾಟಕಗಾರ ಗಿರೀಶ್ ಕಾರ್ನಾಡ್ ಹಾಗೂ ನಮಗೂ ಭಿನ್ನಾಭಿಪ್ರಾಯ ಇದ್ದರು ಸಹ ಅವರು ಉತ್ತಮ ಸಾಹಿತಿಯಾಗಿದ್ದರು, ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಮ್ಮದು‌ ರಾಷ್ಟ್ರೀಯ ವಿಚಾರಧಾರೆಗಳಾದ್ರೆ ಅವರು ಬೇರೆಯದೆ ವಿಚಾರಗಳನ್ನು ಹೊಂದಿದ್ದರು. ಗಿರೀಶ್ ಕಾರ್ನಾಡ್ ಉತ್ತಮ ಸಾಹಿತಿಗಳಾಗಿದ್ದರು, ಸಾಹಿತ್ಯ ಕ್ಷೇತ್ರದ ದಿಗ್ಗಜರಾಗಿದ್ದರು. ನಮ್ಮ ವಿಚಾರಧಾರೆಗಳು ಬೇರೆ ಬೇರೆಯಾಗಿದ್ದರು ಸಹ ಅವರ ಅಗಲಿಕೆ ನಮಗೆ ದುಖಃ ತಂದಿದೆ ಎಂದು ಈಶ್ವರಪ್ಪ ಸಂತಾಪ ಸೂಚಿಸಿದ್ದಾರೆ.

For All Latest Updates

ABOUT THE AUTHOR

...view details