ಬೆಂಗಳೂರು:ಜಾಗತಿಕ ಲಿಂಗಾಯತ ಮಹಾಸಭೆ ತನ್ನ ಸಂಘಟನೆಯ ಮೂಲಕ ಬಸವತತ್ತ್ವಕ್ಕೆ ವಿಶ್ವ ಮಾನ್ಯತೆ ದೊರಕಿಸಲು ಪ್ರಯತ್ನಿಸಬೇಕು ಎಂದು ಮಾಜಿ ಗೃಹ ಸಚಿವ, ಹಿರಿಯ ಲಿಂಗಾಯತ ನಾಯಕ ಎಂ. ಬಿ. ಪಾಟೀಲ್ ಹೇಳಿದರು.
ಕನ್ನಡ ರಾಜ್ಯೋತ್ಸವದಂದು ಜಾಗತಿಕ ಲಿಂಗಾಯತ ಮಹಾಸಭೆ ಸಾಗರೋತ್ತರ ಶಾಖೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪಾಟೀಲ್, ವಿಶ್ವದೆಲ್ಲೆಡೆ ವಿವಿಧ ವೃತ್ತಿಗಳಲ್ಲಿರುವ ಲಿಂಗಾಯತ ಬಾಂಧವರನ್ನು ಒಗ್ಗೂಡಿಸಿ, ಮಹಾಸಭೆಯ ಸದಸ್ಯತ್ವ ನೀಡಿ, ಆ ಮೂಲಕ ಶರಣ ಸಂಸ್ಕೃತಿಯ ಪ್ರಚಾರ ಹಾಗೂ ಪ್ರಸಾರ ಕಾರ್ಯದಲ್ಲಿ ತೊಡಗಬೇಕು.
12 ನೇ ಶತಮಾನದಲ್ಲಿ ಜಗತ್ತಿನಲ್ಲಿ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ, ಸಮಾನತೆ, ಲಿಂಗತಾರತಮ್ಯ ಹೋಗಲಾಡಿಸುವಿಕೆ ಸೇರಿದಂತೆ ಹಲವು ಆದರ್ಶ ಮಾದರಿಗಳನ್ನು ಬೋಧಿಸಲಾಯಿತು. ಜೊತೆಗೆ ಅವುಗಳ ಆಚರಣೆಯಲ್ಲಿ ತೋರಿಸಿದ ಬಸವಣ್ಣ, ಜಗತ್ತಿಗೆ ಮಾದರಿಯಾಗಬೇಕಿತ್ತು. ಆದರೆ, ನಾವು ಕರ್ನಾಟಕ ಬಿಟ್ಟು ಹೊರಗಡೆ ಈ ತತ್ತ್ವಗಳ ಪ್ರಸಾರ ಮಾಡಲಿಲ್ಲ. ವಿಶ್ವದೆಲ್ಲೆಡೆ ನೆಲೆಸಿರುವ ಲಿಂಗಾಯತ ತತ್ತ್ವ ಅನುಯಾಯಿಗಳು ಆ ಕಾರ್ಯ ಮಾಡಲಿದ್ದಾರೆ ಎಂದು ಹೇಳಿದರು.