ರೈತರಿಗೆ ಮಾಹಿತಿ ನೀಡುತ್ತಿರುವ ಕೃಷಿ ವಿವಿಯ ಕಿರಿಯ ವಿಜ್ಞಾನಿ ಮಂಜುನಾಥ್ ಬೆಂಗಳೂರು:ಅತಿವೃಷ್ಟಿ, ಅನಾವೃಷ್ಟಿ ಎರಡೂ ಪ್ರಕೃತಿಯ ನಿಯಮ. 4ರಿಂದ 5 ವರ್ಷಗಳಿಗೊಮ್ಮೆ 'ಎಲ್ ನಿನೋ' ಎನ್ನುವ ಹವಾಮಾನ ಪರಿಣಾಮ ಇರುತ್ತದೆ. ಪೆಸಿಫಿಕ್ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಾಗಿ ಭೂ ಪ್ರದೇಶದಲ್ಲಿ ಕಡಿಮೆಯಾದಾಗ ಈ ಪರಿಣಾಮ ಉಂಟಾಗುತ್ತದೆ. ಈ ವರ್ಷ ಇದು ಕರ್ನಾಟಕದಲ್ಲಿ ಪ್ರಭಾವ ಬೀರಿದ್ದು, ಹಿಂಗಾರು ಮತ್ತು ಮುಂಗಾರು ಮಳೆ ಕಡಿಮೆಯಾಗಿದೆ. ಇದನ್ನು ಮನಗಂಡು ಜಿ.ಕೆ.ವಿ.ಕೆ ಕೃಷಿ ಮೇಳದಲ್ಲಿ ರೈತರಿಗೆ ಸೂಕ್ತ ರೀತಿ ಮಾಹಿತಿ ನೀಡಲಾಗುತ್ತಿದೆ.
ಎಲ್ ನಿನೋ ಪರಿಣಾಮದಿಂದ ಸಮುದ್ರದಲ್ಲಿ ಕಡಿಮೆ ಒತ್ತಡ ನಿರ್ಮಾಣವಾಗಿ ಮೋಡಗಳು ಅಲ್ಲಿಗೆ ಚಲಿಸುತ್ತದೆ. ಆದ್ದರಿಂದ ಈ ಬಾರಿಯ ಮೋಡಗಳು ಸುಮುದ್ರದೆಡೆಗೆ ಚಲಿಸಿರುವುದರಿಂದ ರಾಜ್ಯದಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ಸೂಕ್ತ ಬೆಳೆ ಬೆಳೆಯಲು ಈಗಾಗಲೇ ಐ.ಎಂ.ಡಿ ಮತ್ತು ಐ.ಸಿ.ಆರ್ ಸಹಯೋಗದಲ್ಲಿ ಪರಿಚಯಿಸಿರುವ ಮೇಘದೂತ್ ಮೊಬೈಲ್ ಅಪ್ಲಿಕೇಶನ್ನ ಬಳಕೆಯ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ತಿಳಿಸಲಾಗುತ್ತಿದೆ.
ಈ ಆ್ಯಪ್ ಅನ್ನು ರೈತರು ತಮ್ಮ ಆ್ಯಂಡ್ರಾಯ್ಡ್ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಜಿಲ್ಲೆ ಮತ್ತು ಭಾಷೆಯನ್ನು ಆಯ್ಕೆ ಮಾಡಿ ತಾಲೂಕುವಾರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮುಂದಿನ ಐದು ದಿನಗಳ ಮುನ್ಸೂಚನೆ ಪಡೆಯಬಹುದು. ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಸೂಕ್ಷ್ಮ ಹವಾಮಾನ ಬದಲಾವಣೆಗಳ ಬಗ್ಗೆಯೂ ಮಾಹಿತಿ ಸಿಗುತ್ತದೆ.
ಹವಾಮಾನಕ್ಕೆ ಅನುಗುಣವಾಗಿ ಯಾವ ಕೃಷಿ ಚಟುವಟಿಕೆಯನ್ನು ಕೈಗೊಳ್ಳಬೇಕು, ಏನನ್ನು ಮಾಡಬಾರದು, ಹೆಚ್ಚು ಮಳೆ ಆದಾಗ ನೀರು ಇಂಗಿಸುವ ಕೆಲಸ ಮಾಡಬೇಕು, ಬರ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು ಎನ್ನುವುದನ್ನು ಕೃಷಿ ವಿವಿಯ ವಿದ್ಯಾರ್ಥಿಗಳು ರೈತರಿಗೆ ತಿಳಿ ಹೇಳುವ ಕೆಲಸ ಮಾಡುತ್ತಿದ್ದಾರೆ.
ಇನ್ನು ಈ ವರ್ಷ ಬರಗಾಲದ ಸಮಯವಾದ್ದರಿಂದ ಕಡಲೆಕಾಯಿ, ರಾಗಿ ಮತ್ತು ತೊಗರಿ ಬೆಳೆಗಳನ್ನು ಬೆಳೆಯಲು ಇಲ್ಲಿ ಮಾಹಿತಿ ಒದಗಿಸುತ್ತಿದ್ದೇವೆ. ಸರಿಯಾದ ಸಮಯದಲ್ಲಿ ಸರಿಯಾದ ಬಿತ್ತನೆ ಮಾಡಿ ಸಂದಿಗ್ಧ ಹಂತಗಳನ್ನು ಆತ್ಮವಿಶ್ವಾಸದಿಂದ ದಾಟಬೇಕಿದೆ ಎಂದು ಹೇಳುತ್ತಿದ್ದೇವೆ. ಕೃಷಿ ವಿಶ್ವವಿದ್ಯಾಲಯ ಕೂಡ ಈ ನಿಟ್ಟಿನಲ್ಲಿ ಕೃಷಿ ಮೇಳದ ಹೊರತಾಗಿಯೂ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಕೃಷಿ ವಿವಿಯ ಕಿರಿಯ ವಿಜ್ಞಾನಿ ಮಂಜುನಾಥ್ ಈಟಿವಿ ಭಾರತಕ್ಕೆ ತಿಳಿಸಿದರು.
ಕರ್ನಾಟಕದ ಮುಖ್ಯ 10 ಜಿಲ್ಲೆಗಳ ಹವಾಮಾನದ ಗುಣಗಳನ್ನು ಅಧ್ಯಯನ ನಡೆಸಿ ಯಾವ ಬೆಳೆ ಯಾವ ಸಮಯದಲ್ಲಿ ಸೂಕ್ತ ಮತ್ತು ನಿರಂತರ ಮಾಹಿತಿ ಕೊಡಲಾಗುತ್ತಿದೆ. ರೋಗ, ಕೀಟಗಳು ಮತ್ತು ಹವಾಮಾನಕ್ಕೆ ಇರುವ ಸಂಬಂಧವನ್ನು ನಿಖರವಾಗಿ ದಾಖಲಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಲಾಗುತ್ತಿದೆ. ಧಾಮಿನಿ ಆ್ಯಪ್ ಕೂಡ ಉಪಯುಕ್ತವಾಗಿದ್ದು ಸಿಡಿಲಿನ ಬಗ್ಗೆ ಮುಂಚಿತವಾಗಿ ಎಚ್ಚರಿಕೆ ಪಡೆಯಬಹುದು ಎಂದು ಮಂಜುನಾಥ್ ಹೇಳಿದರು.
ಇದನ್ನೂ ಓದಿ:ಬೆಳೆದ ಉತ್ಪನ್ನ ಮಾರಾಟದ ಕೌಶಲ್ಯತೆ ರೈತರು ಬೆಳೆಸಿಕೊಳ್ಳಬೇಕು: ವಿಶ್ರಾಂತ ಕುಲಪತಿ ಚಂಗಪ್ಪ