ಬೆಂಗಳೂರು: ಕೋವಿಡ್-19ನಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡುವ ಸರ್ಕಾರದ ನಿರ್ಧಾರ ಸ್ವಾಗತಾರ್ಹ, ಆದರೆ ಕುಟುಂಬದಲ್ಲಿ ಒಬ್ಬರು ವಯಸ್ಕ ಸದಸ್ಯರಿಗೆ ಮಾತ್ರ ಪರಿಹಾರ ನೀಡುವ ನಿರ್ಧಾರ ಸರಿಯಲ್ಲ ಎಂದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಟ್ವೀಟ್ ಮೂಲಕ ಈ ಒತ್ತಾಯ ಮಾಡಿರುವ ಸಿದ್ದರಾಮಯ್ಯ, ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳ ಬಿಪಿಎಲ್ ಕುಟುಂಬಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿರುವ ಒಂದು ಲಕ್ಷ ರೂ. ಪರಿಹಾರವನ್ನು ವಿಪತ್ತು ನಿರ್ವಹಣಾ ನಿಯಮಕ್ಕೊಳಪಡಿಸಿ ಐದು ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕೊರೊನಾ ಸೋಂಕನ್ನು ಈಗಾಗಲೇ ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲಾಗಿದೆ. ಆದ್ದರಿಂದ ವಿಪತ್ತು ಪರಿಹಾರದ ನಿಯಮಗಳಡಿ ಮೃತ ವ್ಯಕ್ತಿಗಳ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡಲು ಸಾಧ್ಯ ಇದೆ. ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಈ ಅವಕಾಶವನ್ನು ಮುಖ್ಯಮಂತ್ರಿ ಬಿಎಸ್ವೈ ಅವರು ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸಿಎಂಗೆ ಪತ್ರ ಬರೆದ ಈಶ್ವರ ಖಂಡ್ರೆ
ಈ ಸಂಬಂಧ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಈಶ್ವರ ಖಂಡ್ರೆ, ಸರ್ಕಾರ ಕೋವಿಡ್ನಿಂದ ಮೃತಪಟ್ಟವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಮಾತ್ರ ನೀಡುವುದಾಗಿ ಘೋಷಿಸಿರುವುದೂ ಸರಿಯಲ್ಲ. ಯಾವುದೇ ಪ್ರಕೃತಿ ವಿಕೋಪದಲ್ಲಿ ಮೃತಪಟ್ಟವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಕೋವಿಡ್ ಕೂಡ ಒಂದು ವಿಪತ್ತಾಗಿದ್ದು, ಮೃತಪಟ್ಟ ಎಲ್ಲರಿಗೂ 4 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕೋವಿಡ್ನಿಂದ ಹಲವು ಕುಟುಂಬಗಳು ಮನೆಗೆ ಆಧಾರವಾಗಿದ್ದವರನ್ನೇ ಕಳೆದುಕೊಂಡು ನಲುಗಿಹೋಗಿವೆ. ಹಲವರ ಬದುಕು ಮೂರಾಬಟ್ಟೆಯಾಗಿದೆ. ಕೇವಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬವಷ್ಟೇ ಅಲ್ಲದೆ, ಬಡ, ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದ ಕುಟುಂಬಗಳೂ ಮನೆಗೆ ಜೀವನಾಧಾರವಾಗಿದ್ದವರನ್ನು ಕಳೆದುಕೊಂಡು ತುತ್ತು ಅನ್ನಕ್ಕೂ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕೋವಿಡ್ನಿಂದ ಮೃತಪಟ್ಟಿರುವವರ ಎಲ್ಲ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕೋವಿಡ್ನಿಂದ ಕೇವಲ 33 ಸಾವಿರ ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಈ ಸಾವಿನ ಸಂಖ್ಯೆ ಐದು ಪಟ್ಟು ಹೆಚ್ಚಿದೆ ಎಂಬ ಬಗ್ಗೆ ರಾಜ್ಯದ ಜನರಲ್ಲಿ ವ್ಯಾಪಕ ಅನುಮಾನ ಮೂಡಿದೆ. ರಾಜ್ಯದ ಹಲವೆಡೆ ಅನೇಕರು ಕೋವಿಡ್ನಿಂದ ಮೃತಪಟ್ಟಿದ್ದರೂ ಕೋವಿಡೇತರ ಸಾವೆಂದು ತೋರಿಸಿರುವ ಬಗ್ಗೆಯೂ ದೂರುಗಳು ಬರುತ್ತಿವೆ. ಈ ಹಿನ್ನೆಲೆ ಡೆತ್ ಆಡಿಟ್ ನಡೆಸುವಂತೆ ಆಗ್ರಹಿಸಿದ್ದಾರೆ. ಕೋವಿಡ್ನಿಂದ ಮೃತಪಟ್ಟ ಯಾವುದೇ ಕುಟುಂಬ ಪರಿಹಾರದಿಂದ ವಂಚಿತರಾಗದಂತೆ ಖಾತ್ರಿ ಪಡಿಸುವಂತೆಯೂ ಪತ್ರದಲ್ಲಿ ಒತ್ತಾಯಿಸಿದ್ದಾರೆ.