ಬೆಂಗಳೂರು :ಜನತೆಗೆ ಕೋವಿಡ್ ಲಸಿಕೆ ನೀಡಲು ಕೆಪಿಸಿಸಿ ಆನ್ಲೈನ್ನಲ್ಲಿ ಬೃಹತ್ ಅಭಿಯಾನ ಆರಂಭಿಸಿದೆ. ಕಾಂಗ್ರೆಸ್ ತನ್ನ ಪಕ್ಷದ ಸಂಸದರು ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಬಳಸಿಕೊಂಡು ಲಸಿಕೆ ಖರೀದಿಸಿ ವಿತರಣೆ ಮಾಡಲು ನಿರ್ಧರಿಸಿದೆ.
ಲಸಿಕೆಯ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಹಾಗೂ ಈ ಕಾರ್ಯಕ್ಕೆ ಕಾಂಗ್ರೆಸ್ ಶಾಸಕರ ನಿಧಿ ಬಳಕೆ ಮಾಡಿಕೊಳ್ಳಲು ಅನುಮತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಸೃಷ್ಟಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಜನರನ್ನು ಕೋವಿಡ್ನಿಂದ ಪಾರು ಮಾಡಲು ಅಗತ್ಯವಾದ ಲಸಿಕೆ ಖರೀದಿಸಿ, ನೀಡಲು ಸರ್ಕಾರ ವಿಫಲವಾಗಿರುವುದನ್ನು ಪ್ರಸ್ತಾಪಿಸಿ ಈ ಅಭಿಯಾನದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ವಿಡಿಯೋ ಸಂದೇಶಗಳನ್ನು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಪ್ರಿಯಾಂಕ್ ಖರ್ಗೆ, ಶರಣ್ ಪ್ರಕಾಶ್ ಪಾಟೀಲ್, ಶಾಸಕ ಎನ್.ಎ.ಹ್ಯಾರೀಸ್, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ ಅಭಿಯಾನದ ಭಾಗವಾಗಿ ವಿಡಿಯೋ ಸಂದೇಶ ನೀಡಿದ್ದಾರೆ.
ಅಭಿಯಾನ ಆರಂಭವಾದ ಮೊದಲ ದಿನವೇ 20 ಸಾವಿರಕ್ಕೂ ಅಧಿಕ ಮಂದಿ ತಮ್ಮ ಬೆಂಬಲ ಸೂಚಿಸಿ, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ಲಸಿಕೆ ಖರೀದಿಸಿ, ಲಸಿಕೆ ಹಾಕಿಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡುವಂತೆ ಸಾವಿರಾರು ಮಂದಿ ಸರ್ಕಾರವನ್ನು ಆಗ್ರಹಿಸಿದ್ದಾರೆ.