ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರು: ಮುಂಗಾರು ಮಳೆ ಕೊರತೆಯಿಂದ ರಾಜ್ಯದ ಬಹುತೇಕ ಕಡೆ ಬರಪರಿಸ್ಥಿತಿ ಉಂಟಾಗಿದ್ದು, ಬಿತ್ತನೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಕೆಲವೆಡೆ ಬಿತ್ತನೆಯಾಗಿದ್ದರೂ ಉತ್ತಮ ಇಳುವರಿ ಬರುವ ಸಾಧ್ಯತೆ ತೀರಾ ಕಡಿಮೆ ಇದ್ದು, ರೈತರು ಸಂಕಷ್ಟಕ್ಕೆ ತುತ್ತಾಗಿರುವ ಪರಿಸ್ಥಿತಿ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಇಂದು ಒತ್ತಾಯಿಸಿದರು.
ರಾಜ್ಯದಲ್ಲಿ ಎದುರಾಗಿರುವ ಬರಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಲು ನಿಲುವಳಿ ಸೂಚನೆಯಡಿ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಈಗಾಗಲೇ ನಿಲುವಳಿ ಸೂಚನೆ ನೋಟಿಸ್ ತಮಗೆ ಕಳುಹಿಸಿಕೊಟ್ಟಿದ್ದೇವೆ. ಈ ಬಗ್ಗೆ ತಾವು ಪರಿಗಣಿಸಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರಲ್ಲದೆ, ನಿಲುವಳಿ ಸೂಚನೆಗೆ ಪ್ರಾಸ್ತಾವಿಕವಾಗಿ ಮಾತನಾಡಿ, ರೈತರ ಸಂಕಷ್ಟಗಳ ಕುರಿತು ಬೆಳಕು ಚೆಲ್ಲಿದರು.
ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಂತ ಸಕಾಲಕ್ಕೆ ವಾಡಿಕೆ ಪ್ರಮಾಣದ ಮಳೆಯಾಗದೆ, ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಒಂದು ಅಂದಾಜಿನ ಪ್ರಕಾರ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿತ್ತು. ತಮಗಿರುವ ಮಾಹಿತಿಯಂತೆ ಇದುವರೆಗೆ ಕೇವಲ 1.40 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಇದರ ಪ್ರಮಾಣ ಶೇ. 16.6 ರಷ್ಟಿದೆ ಎಂದರು.
ಸಿದ್ಧಮಾಡಿಕೊಂಡಿದ್ದ ಬಿತ್ತನೆ ಬೀಜವನ್ನು ರೈತರು ಹೊಲ-ಗದ್ದೆಗಳಲ್ಲಿ ಬಿತ್ತನೆ ಮಾಡಿದ್ದಾರೆ. ಸಕಾಲಿಕವಾಗಿ ಬಿತ್ತನೆ ಮಾಡದ ಕಾರಣ ಬೆಳೆಗಳು ಸರಿಯಾಗಿ ಫಸಲು ನೀಡುವುದಿಲ್ಲ. ಇದರಿಂದ ಇಳುವರಿ ಕಡಿಮೆಯಾಗಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಬಿತ್ತನೆ, ರಸಗೊಬ್ಬರಕ್ಕಾಗಿ ಸಾಲ ಮಾಡಿರುವ ರೈತರು, ನಿರೀಕ್ಷಿತ ಬೆಳೆ ಇಲ್ಲದೆ, ಮತ್ತೆ ಸಾಲದ ಸುಳಿಗೆ ಸಿಲುಕುತ್ತಾರೆ. ಹಾಗಾಗಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರಗಾಲ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಮಸ್ಯೆ ಬಗೆಹರಿಸಲು ಸಿಇಓಗಳ ಬಳಿ ಒಂದು ಕೋಟಿ ರೂ. ಇದೆ ಎಂದು ಸರ್ಕಾರ ಹೇಳಿದೆ. ಇದು ಸಾಲುವುದಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿಯನ್ನಾದರೂ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಯು ಟಿ ಖಾದರ್, ರೈತರ ಸಮಸ್ಯೆ ಬಗ್ಗೆ ನಮಗೂ ಕಳಕಳಿ ಇದೆ. ಸಂಬಂಧಪಟ್ಟ ಸಚಿವರಿಂದ ಉತ್ತರ ಕೊಡಿಸಲಾಗುವುದು. ಈ ವಿಚಾರ ಕುರಿತು ಜೆಡಿಎಸ್ ಹಾಗೂ ಆಡಳಿತ ಪಕ್ಷದ ಕೆಲವು ಶಾಸಕರು ಚರ್ಚೆಗೆ ಅವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಸಲ್ಲಿಸಿರುವ ನಿಲುವಳಿ ಸೂಚನೆ ತಿರಸ್ಕರಿಸಲಾಗಿದೆ. ನಾಳೆ ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದರು.
ಮತ್ತೆ ಮಾತು ಮುಂದುವರೆಸಿದ ಬಸವರಾಜ ಬೊಮ್ಮಾಯಿ, ಇದು ಗಂಭೀರವಾದ ವಿಚಾರವಾಗಿದ್ದು, ಭೋಜನ ವಿರಾಮದ ಬಳಿಕ ಕೃಷಿ ಸಚಿವರನ್ನು ಕರೆಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಭಾಧ‍್ಯಕ್ಷರಿಗೆ ಮನವಿ ಮಾಡಿದರು. ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಿದೆ. ಬರಗಾಲ ಮತ್ತು ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಬಳಿಕ ಸಭಾಧ್ಯಕ್ಷರು ಬಜೆಟ್ ಮೇಲಿನ ಚರ್ಚೆಗೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ:ಪಾರ್ಕ್ ಜೋನ್ ನಿಂದ ಸೆಂಚುರಿ ಕ್ಲಬ್ ಹೊರಗಿಡುವ ಕುರಿತು ಶೀಘ್ರ ನಿರ್ಧಾರ: ಸಚಿವ ಬೋಸರಾಜ್