ಬೆಂಗಳೂರು: ಪರಿವಾರ ಮತ್ತು ತಳವಾರ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಜಾತಿ ಪ್ರಮಾಣ ಪತ್ರ ತೀರಾ ಅಗತ್ಯವಾಗಿದ್ದು ಈ ಸಂಬಂಧ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ಸಿಎಂ ಅವರಿಗೆ ಪತ್ರ ಬರೆದ ಸಿದ್ದರಾಮಯ್ಯ, 2002ರ ಮಾ.3ರಂದು ಪರಿವಾರ ಮತ್ತು ತಳವಾರ ಸಮುದಾಯಗಳನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಈ ಸಮುದಾಯಗಳು ಅತ್ಯಂತ ಹಿಂದುಳಿದ ಸ್ವರೂಪದ ವಾಗಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕೂಲಿ ಕೆಲಸ, ಸೌದೆ ಮಾರಾಟ, ಪಶುಸಂಗೋಪನೆ, ಗುಡಿ ಕೈಗಾರಿಕೆಗಳ ಮೂಲಕ ಜೀವನ ನಡೆಸುತ್ತಿವೆ. ಈ ಸಮುದಾಯಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದ ಬುಡಕಟ್ಟುಗಳ ಸ್ವರೂಪ ಹೊಂದಿದ್ದವು ಎಂದು ಉಲ್ಲೇಖಿಸಿದ್ದಾರೆ.
ಇವುಗಳ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕರ್ನಾಟಕ ವಿಶ್ವವಿದ್ಯಾಲಯ ಮಾನವ ಶಾಸ್ತ್ರ ವಿಭಾಗಕ್ಕೆ ಸೂಚಿಸಲಾಗಿದೆ. ಅದರಂತೆ ಈ ಸಮುದಾಯಗಳ ಧಾರ್ಮಿಕ ಆಚರಣೆಗಳು, ಭಾಷೆ, ಜೀವನ ಶೈಲಿ, ಜೀವನಮಟ್ಟ, ದೇಹ ರಚನೆ, ಸಮಾಜೋ-ಆರ್ಥಿಕ ಪರಿಸ್ಥಿತಿಗಳು, ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಮತ್ತು ಭೌಗೋಳಿಕವಾಗಿ ಪ್ರತ್ಯೇಕ ವಾಸ ಇತ್ಯಾದಿಗಳನ್ನು ಅಧ್ಯಯನ ಮಾಡುವಾಗ ಸ್ಪಷ್ಟವಾಗಿ ಬುಡಕಟ್ಟು ಸ್ವಭಾವಗಳನ್ನು ಹೊಂದಿದ ಪಂಗಡಗಳಾಗಿರುವುದು ಕಂಡು ಬಂದಿತ್ತು ಎಂದಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯ ಮಾನವಶಾಸ್ತ್ರ ವಿಭಾಗವು ಮಾಡಿರುವ ಜನಾಂಗೀಯ ಅಧ್ಯಯನವನ್ನು ಆಧರಿಸಿ 2014ರ ಫೆ.11ರಂದು ಸಂಪುಟ ಸಭೆಯಲ್ಲಿ ಪರಿವಾರ ಮತ್ತು ತಳವಾರ ಎಂಬ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿದ ಪಂಗಡಗಳು ಎಂದು ಅಂಗೀಕರಿಸಿದ, ಕೇಂದ್ರ ಸರ್ಕಾರಕ್ಕೆ ತುರ್ತಾಗಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು. ಅದರಂತೆ ಅದೇ ತಿಂಗಳ 25 ರಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಪತ್ರ ಬರೆಯಲಾಯಿತು.