ಬಿಪಿಎಲ್ ಕಾರ್ಡ್ದಾರರಿಗೆ ರಾಜ್ಯ ಸರ್ಕಾರ ತಲಾ 10 ಕೆಜಿ ಅಕ್ಕಿ ವಿತರಿಸಲಿ: ಎಸ್ಆರ್ ಪಾಟೀಲ್ ಒತ್ತಾಯ - Give ten kg rice
ಲಾಕ್ ಡೌನ್ ನಿಂದ ಜನ ದುಡಿಮೆಯಿಲ್ಲದೇ ಮನೆಗಳಲ್ಲೇ ಕೂರುವಂತಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬಡ ಜನರ ಬಳಿ ಹಣ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಈ ಕೂಡಲೇ ಬಿಪಿಎಲ್ ಕಾರ್ಡ್ ದಾರ ಕುಟುಂಬದ ಪ್ರತೀ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡಬೇಕು ಎಂದು ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆಗ್ರಹಿಸಿದ್ದಾರೆ.
ಬೆಂಗಳೂರು:ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ ತಲಾ 10 ಕೆಜಿ ಅಕ್ಕಿ ನೀಡಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ಆರ್ ಪಾಟೀಲ್ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಸರ್ಕಾರ ಜಾರಿ ಮಾಡಿರೋ ಲಾಕ್ಡೌನ್ ನಿಂದಾಗಿ ಬಡವರು, ರೈತರು, ಕೂಲಿ ಕಾರ್ಮಿಕರು ಮತ್ತು ಸ್ವ ಉದ್ಯೋಗಿಗಳಿಗೆ ಸಾಕಷ್ಟು ತೊಂದರೆಯಾಗಿದೆ. ದುಡಿಮೆಯಿಲ್ಲದೇ ಜನ ಜೀವನ ನಡೆಸುವುದೇ ದುಸ್ತರವಾಗಿದೆ. ಇಂಥಾ ಸಂದರ್ಭದಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಅವರನ್ನು ಅಕ್ಕಿ ಕೇಳಿದರೆ ಸಾಯೋದೇ ಒಳ್ಳೇದು ಎಂಬ ಉಡಾಫೆ ಮಾತಾಡುತ್ತಿದ್ದಾರೆ. ಲಾಕ್ ಡೌನ್ ನಿಂದ ಜನ ದುಡಿಮೆಯಿಲ್ಲದೇ ಮನೆಗಳಲ್ಲೇ ಕೂರುವಂತಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬಡ ಜನರ ಬಳಿ ಹಣ ಇಲ್ಲ. ಹೀಗಾಗಿ ಬಿಜೆಪಿ ಸರ್ಕಾರ ಈ ಕೂಡಲೇ ಬಿಪಿಎಲ್ ಕಾರ್ಡ್ ದಾರ ಕುಟುಂಬದ ಪ್ರತೀ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ನೀಡಬೇಕು ಎಂದು ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.
ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಪಿಎಲ್ ಕುಟುಂಬದ ವ್ಯಕ್ತಿಯೊಬ್ಬರಿಗೆ 7 ಕೆಜಿಯಷ್ಟು ಅಕ್ಕಿಯನ್ನು ಕೊಡಲಾಗುತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ 7 ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಲಾಗಿತ್ತು. ಈಗ ಅಕ್ಕಿಯ ಪ್ರಮಾಣವನ್ನು 2 ಕೆಜಿಗೆ ಇಳಿಸಲಾಗಿದೆ. ಇದು ಅಕ್ಷಮ್ಯ ಎಂದು ವಿವರಿಸಿದ್ದಾರೆ.
ಜನ ಸಂಕಷ್ಟದಲ್ಲಿ ಇಲ್ಲದ ಸಮಯದಲ್ಲೇ ಕಾಂಗ್ರೆಸ್ ಸರ್ಕಾರ ಪ್ರತಿ ವ್ಯಕ್ತಿಗೆ 7 ಕೆಜಿಯಷ್ಟು ಅಕ್ಕಿ ಕೊಡುತ್ತಿತ್ತು. ಈಗ ಲಾಕ್ ಡೌನ್ ಇರುವುದರಿಂದ ಬಿಪಿಎಲ್ ಕುಟುಂಬಗಳು ಸಂಕಷ್ಟದಲ್ಲಿವೆ. ಹಾಗಾಗಿ ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ಕೊಡಬೇಕು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ. ಕಳೆದ ಬಾರಿ ಲಾಕ್ ಡೌನ್ ಮಾಡಿದ ಸಮಯದಲ್ಲಿ ಸಂಕಷ್ಟದಲ್ಲಿದ್ದವರಿಗೆ ಸರ್ಕಾರ 5 ಸಾವಿರ ಸಹಾಯಧನ ಘೋಷಿಸಿತ್ತು. ಆದರೆ, ಆ ದುಡ್ಡು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪಿರಲಿಲ್ಲ. ಈಗ ಮತ್ತೆ ಲಾಕ್ ಡೌನ್ ಜಾರಿ ಮಾಡಲಾಗಿದೆ. ಅರ್ಹ ಕುಟುಂಬಗಳಿಗೆ ತಲಾ 10 ಸಾವಿರ ಆರ್ಥಿಕ ನೆರವು ನೀಡಬೇಕು ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಇಷ್ಟು ದಿನ ಬೆಂಗಳೂರಿನಲ್ಲಿ ಮಾತ್ರ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದ್ದ ಕೊರೊನಾ ಸೋಂಕಿತರ ಸಂಖ್ಯೆ ಈಗ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ. ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸರ್ಕಾರ ಕೂಡಲೇ ಜಿಲ್ಲೆಗಳತ್ತ ಗಮನ ಹರಿಸಬೇಕು ಎಂದು ಆಗ್ರಹಿಸುತ್ತೇನೆ.
ಮೈಸೂರು, ತುಮಕೂರು, ಬಳ್ಳಾರಿ, ಹಾಸನ, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿ ದಿನ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟುತ್ತಿದೆ. ಸಾವಿನ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಬೆಡ್ಗಳು, ಆ್ಯಂಬುಲೆನ್ಸ್, ಆ್ಯಕ್ಸಿಜನ್ ಲಭ್ಯತೆ ಮತ್ತು ವೆಂಟಿಲೇಟರ್ ಗಳ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೊರೊನಾ ಸೋಂಕು ಈ ಬಾರಿ ಹಳ್ಳಿಗಳನ್ನೂ ವ್ಯಾಪಿಸುತ್ತಿದೆ. ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಕೊರೊನಾ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಇಲ್ಲ. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರುಗಳು ಬೆಂಗಳೂರಿನಲ್ಲೇ ಇರುತ್ತಾರೆ. ತಕ್ಷಣವೇ ಅವರನ್ನು ಜಿಲ್ಲೆಗಳತ್ತ ಗಮನ ಹರಿಸುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತೇನೆ ಎಂದಿದ್ದಾರೆ.