ಬೆಂಗಳೂರು: ಸತ್ಯ, ಧರ್ಮ, ಅಹಿಂಸೆಯನ್ನು ಪ್ರತಿಪಾದಿಸುವ ಭಗವದ್ಗೀತೆ ಸರ್ವ ಕಾಲಕ್ಕೂ ಶ್ರೇಷ್ಠ ಗ್ರಂಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಅವರು ಇಂದು ವಸಂತಪುರದ ಇಸ್ಕಾನ್ನ ಶ್ರೀ ರಾಜಾಧಿರಾಜ ಗೋವಿಂದ ಮಂದಿರದಲ್ಲಿ ಗೀತ ಜಯಂತಿಯ ಸಂದರ್ಭದಲ್ಲಿ ಏರ್ಪಡಿಸಲಾದ 'ಗೀತ ದಾನ ಯಜ್ಞ ಮಹೋತ್ಸವ'ವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಯಾವುದೇ ಪಠ್ಯ ಕಲಿಯಲು ಶಿಕ್ಷಕರ ಅವಶ್ಯಕತೆ ಇರುತ್ತದೆ. ಆದರೆ, ಭಾವನೆಗಳಾದ ಶಾಂತ, ಕ್ರೌರ್ಯ, ಸಂತಸ, ದುಃಖ ಮುಂತಾದವುಗಳನ್ನು ಯಾರೂ ಕಲಿಸಿಲ್ಲ. ಇದು ನಮ್ಮಲ್ಲಿಯೇ ಪ್ರಕಟಗೊಳ್ಳುತ್ತದೆ.
ಭಗವದ್ಗೀತೆ ಸಹ ನಮ್ಮ ಜೀವನಕ್ಕೆ ಹತ್ತಿರವಾದದ್ದು. ನಾವು ಹೇಗೆ ಶೋಕದಿಂದ ಮುಕ್ತವಾಗಬಹುದೆಂದು ತಿಳಿಸಿಕೊಡುತ್ತದೆ. ಹಾಗೆಯೇ ಮೃತ್ಯುವಿನ ಭಯವನ್ನು ಹೋಗಲಾಡಿಸುತ್ತದೆ. ನಮ್ಮನ್ನು ಆಧ್ಯಾತ್ಮಿಕದ ಕಡೆ ಕರೆದೊಯ್ಯುತ್ತದೆ. ಎಷ್ಟೋ ಮಹಾಕವಿ, ಸಾಧಕರಿಗೆ ಇದು ಪ್ರೇರಣಾ ಶಕ್ತಿಯಾಗಿದೆ.
ಭಗವದ್ಗೀತೆಯ ನೀತಿಯನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳುವುದರ ಮೂಲಕ ಸರಿಯಾದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನಾವು ಎಂದಿಗೂ ಸಕಾರಾತ್ಮಕವಾಗಿ ಆಲೋಚನೆ ಮಾಡಿ ಒಳ್ಳೆಯ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಅದೇ ತರನಾದ ಜೀವನ ಶೈಲಿಯನ್ನು ಮುಂದಿನ ಯುವ ಪೀಳಿಗೆಗೂ ತಲುಪಿಸಬೇಕೆಂದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಭಗವದ್ಗೀತೆ ದೇವರ ವಾಣಿಯಾಗಿದೆ. ಇದನ್ನು ಪಠಿಸುವುದರಿಂದ ನಮಗೆ ಶಾಂತಿ, ನೆಮ್ಮದಿ ಹಾಗೂ ಸಹನೆ ದೊರೆಯುತ್ತದೆ. ಅಲ್ಲದೆ ಬದುಕಿನ ದೃಷ್ಟಿಕೋನ ಬದಲಾಗಿ ಮನುಕುಲದ ಅಭಿವೃದ್ದಿ ಸಾಧ್ಯವಾಗುತ್ತದೆ.