ಬೆಂಗಳೂರು:ರಾಜ್ಯದಲ್ಲಿ ಇಂದಿನಿಂದ 6,7,8 ಮತ್ತು 9 ನೇ ತರಗತಿ ಮಕ್ಕಳಿಗೆ ವಿದ್ಯಾಗಮ ತರಗತಿ ಹಾಗೂ ಬಹುತೇಕ ಶಾಲಾ-ಕಾಲೇಜುಗಳು ಆರಂಭವಾಗಿವೆ. ರಾಜ್ಯದ ವಿವಿಧ ಶಾಲಾ-ಕಾಲೇಜುಗಳಿಗೆ ಮೊದಲ ದಿನವಾದ ಇಂದು 78,794 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಅಂದರೆ, ಶೇ. 37.63ರಷ್ಟು ಹಾಜರಾತಿ ಇದ್ದು, ಇದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆಯೇ ಬಹುಪಾಲು ಇದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ 5,497 ಪದವಿ ಪೂರ್ವ ಕಾಲೇಜುಗಳು ಇದ್ದು, ಈ ವರ್ಷ 2,41,965 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಈ ಪೈಕಿ ಮೊದಲ ದಿನ 78,794 ವಿದ್ಯಾರ್ಥಿಗಳು ಅಂದರೆ ಶೇ.37.63 ರಷ್ಟು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಜರಾಗಿದ್ದಾರೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಅತಿ ಹೆಚ್ಚು ಹಾಜರಾತಿ ಇತ್ತು ಎಂದು ತಿಳಿದು ಬಂದಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಟಿ ನಡೆಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕಳೆದ 6-7 ತಿಂಗಳಿನಿಂದ ಮಕ್ಕಳು ಶಾಲೆ ಕಡೆ ಮುಖ ಮಾಡಿರಲಿಲ್ಲ. ಸದ್ಯ 'ಕೊರೊನಾ ಓಡಿಸೋಣ ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣಾ' ಎಂಬ ಧ್ಯೇಯ ವಾಕ್ಯದೊಂದಿಗೆ ಶಾಲಾ ಕಾಲೇಜುಗಳನ್ನು ಶುರು ಮಾಡಲಾಗಿದೆ ಎಂದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು, ಆದಿಚುಂಚನಗಿರಿಯ ನಿರ್ಮಾಲಾನಂದ ಸ್ವಾಮೀಜಿ, ಸುತ್ತೂರು ಶ್ರೀ, ಸಿದ್ದಗಂಗಾ ಶ್ರೀಗಳು ಸೇರಿದಂತೆ ವಿವಿಧ ಗೌರವಾನ್ವಿತರು ಈ ಕಾರ್ಯಕ್ಕೆ ಹಾರೈಸಿ, ಮಕ್ಕಳಿಗೆ ಯಾವುದೇ ತೊಂದರೆ ಇಲ್ಲದೇ ಶಿಕ್ಷಣ ದೊರೆಯಲಿ ಎಂದು ಆಶೀರ್ವಾದ ಮಾಡಿದ್ದಾರೆ. ಶಿಕ್ಷಣ ಫೌಂಡೇಶನ್ ನಿಂದ ಎಸ್ಎಸ್ಎಲ್ಸಿ ಮಕ್ಕಳಿಗಾಗಿ ಗಣಿತ, ಇಂಗ್ಲಿಷ್ ಕಲಿಯಲು ವರ್ಕ್ ಔಟ್ ಪುಸ್ತಕ ಮಾಡಿದ್ದು, ಅದನ್ನು ಎಲ್ಲರಿಗೂ ಹಂಚಿದ್ದಾರೆ ಎಂದರು.
ಉಡುಪಿಯಲ್ಲಿ ಕೊರೊನಾ ಪಾಸಿಟಿವ್- ಶಾಲೆಗಳು ಬಂದ್:
ಉಡುಪಿ ಜಿಲ್ಲೆಯ ಹೆಬ್ರಿ ಕರ್ನಾಟಕ ಪಬ್ಲಿಕ್ ಶಾಲೆ ಅಟೆಂಡರ್ ಮತ್ತು ಬ್ರಹ್ಮಾವರ ಸರ್ಕಾರಿ ಶಾಲೆಯ ಶಿಕ್ಷಕಿಗೆ ಕೋವಿಡ್ ಪಾಸಿಟಿವ್ ಬಂದ ಕಾರಣ ಆ ಎರಡು ಶಾಲೆಗಳು ಪ್ರಾರಂಭವಾಗಿಲ್ಲ. ಆದರೆ, ಸೋಮವಾರ ಆರಂಭವಾಗುವ ಸಾಧ್ಯತೆಗಳಿವೆ.
ಇದೇ ವೇಳೆ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡದೆ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಸಚಿವರು, ಸೋಮವಾರದಿಂದ ನಮ್ಮ ಶಿಕ್ಷಣ ಇಲಾಖೆಯ ತಂಡಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ಈ ಮೊದಲು ಎಸ್ಎಸ್ಎಲ್ಸಿ ತರಗತಿಗಳ ವಿದ್ಯಾರ್ಥಿಗಳಿಗೆ ತಲಾ 10 ವಿದ್ಯಾರ್ಥಿಗಳಿಗೆ ಒಬ್ಬೊಬ್ಬ ಮೆಂಟರ್ ಗಳನ್ನು ನೇಮಕ ಮಾಡಲಾಗಿತ್ತು. ಈ ವ್ಯವಸ್ಥೆ ಪುನಃ ಪ್ರಾರಂಭಿಸಲು ಆದೇಶಿಸಲಾಗಿದೆ ಎಂದರು.
ಪಠ್ಯಪುಸ್ತಕ ತಕಾರರು:
ಸದ್ಯಕ್ಕೆ ಪೂರ್ಣ ದಿನ ತರಗತಿ ನಡೆಯುತ್ತಿಲ್ಲ. ಕೋರ್ ವಿಷಯಕ್ಕೆ ಎಷ್ಟು ಸಮಯ ಸಿಗುತ್ತೆ ನೋಡಬೇಕು. ಸೋಮವಾರ ಈ ಬಗ್ಗೆ ಚರ್ಚೆ ಮಾಡಲಾಗುತ್ತೆ. ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗುತ್ತೆ. ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಬೇಡ. ಪರೀಕ್ಷೆಗಾಗಿ ಸಾಕಷ್ಟು ಸಮಯ ಹಾಗೂ ಸಿಲಬಸ್ ಎಷ್ಟು ಎಂಬ ಮಾಹಿತಿಯನ್ನೂ ನೀಡಲಾಗುತ್ತೆ ಎಂದು ಇದೇ ವೇಳೆ ಸುರೇಶ್ ಕುಮಾರ್ ಸ್ಪಷ್ಟಪಡಿಸಿದರು.
ಖಾಸಗಿ ಶಾಲೆಗಳಲ್ಲಿ ಶುಲ್ಕ ಕಿತ್ತಾಟ-ಏಕರೂಪ ಶುಲ್ಕ ವ್ಯವಸ್ಥೆ ಕಷ್ಟ:
ಖಾಸಗಿ ಶಾಲೆಗಳಲ್ಲಿ ಏಕರೂಪದ ಶುಲ್ಕ ವ್ಯವಸ್ಥೆ ಸಂಬಂಧ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮಾತನಾಡಿ, ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದ ಯಾವುದೇ ಆದೇಶ ನೀಡಿಲ್ಲ. ಅದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಪೋಷಕರಿಗೆ ಬಿಟ್ಟ ವಿಷಯ. ಈಗ ಇಬ್ಬರೂ ಸರ್ಕಾರದ ಮಧ್ಯಸ್ಥಿಕೆಗೆ ಮನವಿ ಮಾಡಿದ್ದಾರೆ. ಅವರು ಒಮ್ಮತಕ್ಕೆ ಬರದೇ ಇದ್ದರೆ ಆಗ ಸರ್ಕಾರ ಮಧ್ಯ ಪ್ರವೇಶ ಮಾಡಲಿದೆ. ಈಗಾಗಲೇ ಒಂದು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳಿಗೆ ಸೇರಿದ್ದಾರೆ. ಇನ್ನೂ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಅಡ್ಮಿಷನ್ ಆಗಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಅಡ್ಮಿಷನ್ ಕ್ಲೋಸ್ ಮಾಡಿಲ್ಲ. ಎಷ್ಟು ವಿದ್ಯಾರ್ಥಿಗಳು ಬಂದರೂ ಖಂಡಿತ ಸೇರಿಸಿಕೊಳ್ಳುತ್ತೇವೆ. ಯಾವ ವಿದ್ಯಾರ್ಥಿಗೂ ಪ್ರವೇಶ ನಿರಾಕರಿಸುವುದಿಲ್ಲ ಎಂದರು.