ಬೆಂಗಳೂರು: ನಗರದಲ್ಲಿ ದುರಂತ ಘಟನೆಯೊಂದು ನಡೆದಿದೆ. ಆಟವಾಡುತ್ತಿದ್ದ ವೇಳೆ ಆಯತಪ್ಪಿ ಈಜುಕೊಳದಲ್ಲಿ ಬಿದ್ದು ಬಾಲಕಿ ಮೃತಪಟ್ಟ ಘಟನೆ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.
ಗುರುವಾರ ಸಂಜೆ 7.30ರ ವೇಳೆಗೆ ಅಪಾರ್ಟ್ಮೆಂಟ್ನ ಸ್ವಿಮ್ಮಿಂಗ್ ಪೂಲ್ ಬಳಿ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಆಯತಪ್ಪಿ ಸ್ವಿಮ್ಮಿಂಗ್ ಪೂಲ್ಗೆ ಬಿದ್ದಿದ್ದಾಳೆ. ನೀರಿನಲ್ಲಿ ಬಿದ್ದು ಒದ್ದಾಡುತ್ತಿದ್ದಾಗ ಆಕೆಯನ್ನು ಕೆಲವರು ಗಮನಿಸಿ, ಕೂಡಲೇ ಸಹಾಯಕ್ಕೆ ದೌಡಾಯಿಸಿದ್ದಾರೆ. ಬಳಿಕ ಈಜುಕೊಳದಿಂದ ಮೇಲಕ್ಕೆತ್ತಿ ಹೊರತಂದಿದ್ದಾರೆ. ಆದರೆ, ಬಾಲಕಿ ನೀರಿನಲ್ಲಿ ಬಿದ್ದಿದ್ದರಿಂದ ತೀವ್ರ ಅಸ್ವಸ್ಥಗೊಂಡಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಘಟನೆ ಕುರಿತು ಮೃತಳ ತಂದೆ ರಾಜೇಶ್ ದೂರು ನೀಡಿದ್ದಾರೆ. ಸದ್ಯ ವರ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈಜುಕೊಳದಲ್ಲಿ ಬಿದ್ದು ಬಾಲಕಿ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ದೃಢಪಡಿಸಿದ್ದಾರೆಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಜೊತೆಗೆ ಬಾಲಕಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ತನಿಖೆಗೆ ಮನವಿ ಮಾಡಿದ್ದಾರೆ ಎಂದು ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.