ಬೆಂಗಳೂರು: ರಾಜ್ಯ ಪ್ರವಾಸಕ್ಕೆ ಅನುಕೂಲವಾಗಲಿ ಎಂದು ಕುಟುಂಬಸ್ಥರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ 1.13 ಕೋಟಿ ರೂ.ಮೌಲ್ಯದ ಹೊಸ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಬಿಎಸ್ವೈ ನಾಳೆ ಇದೇ ಕಾರಿನಲ್ಲಿ ತವರು ಜಿಲ್ಲೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಗಣೇಶ ಹಬ್ಬದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ದೂರದ ಪ್ರವಾಸದ ವೇಳೆ ಆಯಾಸವಾಗದೆ ಇರಲಿ ಅನ್ನೋ ದೃಷ್ಟಿಯಿಂದ ಕುಟುಂಬಸ್ಥರು ಯಡಿಯೂರಪ್ಪಗೆ ಟೊಯೋಟಾ ವೆಲ್ ಫೈರ್ ಹೈಬ್ರಿಡ್ ಕಾರನ್ನು ಗಿಫ್ಟ್ ನೀಡಿದ್ದಾರೆ.
ಆಗಸ್ಟ್ 16 ರಂದು ನೋಂದಣಿಯಾಗಿರುವ ಕೆಎ-05 ಎನ್‌ಡಿ-4545 ಸಂಖ್ಯೆಯ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಬಿಎಸ್ವೈ ಕುಟುಂಬದ ಒಡೆತನದಲ್ಲಿರುವ ಮೈತ್ರಿ ಮೋಟಾರ್ಸ್ ಮಾಲೀಕತ್ವದ ಹೆಸರಿನಲ್ಲಿ ಕಾರು ನೋಂದಣಿಯಾಗಿದೆ.
ಈ ಕಾರಿನಲ್ಲಿ ಏನೇನಿರುತ್ತೆ?
ಟೊಯೊಟಾ ವೆಲ್ ಫೈರ್ ಹೈಬ್ರೀಡ್ ಕಾರಿನ ಬೆಲೆ 89.90 ಲಕ್ಷ ರೂ.ಗಳಾಗಿದ್ದು, ತೆರಿಗೆ ಇತರ ವೆಚ್ಚ ಸೇರಿ 1.13 ಕೋಟಿ ಆಗಲಿದೆ. ಯಡಿಯೂರಪ್ಪ ಅವರಿಗೆ 79 ವರ್ಷ ವಯಸ್ಸಾಗಿದ್ದು ದೂರದ ಪ್ರವಾಸಕ್ಕೆ ಈ ಕಾರು ಹೇಳಿ ಮಾಡಿಸಿದಂತಿದೆ. ಪ್ರವಾಸದ ವೇಳೆ ಕಾರಿನ ಮೇಲ್ಭಾಗವನ್ನು ತೆರೆದು ಕಾರಿನ ಒಳಗಡೆಯಿಂದಲೇ ನಿಂತು ಜನರನ್ನು ನೋಡಬಹುದು.
ಪ್ರಯಾಣದ ವೇಳೆ ವಿಶ್ರಾಂತಿ ಪಡೆಯಲು ಪೂರಕವಾಗಿ ಹೆಡ್ ರೆಸ್ಟ್, ಪುಷ್ ಬ್ಯಾಕ್ ಸೀಟ್, ಫೂಟ್ ರೆಸ್ಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಲ್ಲವೂ ರಿಮೋಟ್ ಕಂಟ್ರೋಲ್ ಮೂಲಕವೇ ನಿರ್ವಹಣೆ ಮಾಡಬಹುದಾಗಿದೆ. ಹವಾನಿಯಂತ್ರಿತ ವ್ಯವಸ್ಥೆ ಕೂಡ ತಾವೇ ನಿಯಂತ್ರಿಸುವ ವ್ಯವಸ್ಥೆ ಇದ್ದು, ಕಾರಿನ ಡೋರ್ ಕೂಡ ಆಟ್ಯೋಮ್ಯಾಟಿಕ್ ವ್ಯವಸ್ಥೆ ಹೊಂದಿದೆ.