ಬೆಂಗಳೂರು:ರಾಜಧಾನಿಯಲ್ಲಿ ನಕಲಿ ಸಿಮ್ ಜಾಲ ಪತ್ತೆಯಾಗಿದೆ. ಈ ಸಂಬಂಧ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಘಾನಾ ದೇಶದ ಪ್ರಜೆಯನ್ನು ಬಂಧಿಸಿ, ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
26 ವರ್ಷದ ಸ್ಯಾಮುಯಲ್ ಒಕೇನ್ ಎಂಬಾತನೆ ಬಂಧಿತ ಆರೋಪಿಯಾಗಿದ್ದು, 5 ಸಿಮ್ ಕಾರ್ಡ್, 6 ವಿವಿಧ ಬ್ಯಾಂಕ್ಗಳ ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ಬಿದರಹಳ್ಳಿಯಲ್ಲಿ ವಾಸವಾಗಿದ್ದ ವಂಚಕ, ಅಕ್ರಮವಾಗಿ ಹಣ ಸಂಪಾದನೆ ಮಾಡಲು ಅಡ್ಡದಾರಿ ಹಿಡಿದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ತನಗೆ ಪರಿಚಿತರಾಗಿದ್ದ ತ್ರಿಪುರ, ಅಸ್ಸೋಂ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ರಾಜ್ಯಗಳ ಜನರಿಗೆ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಮಾಡಿಸಿಕೊಳ್ಳುವಂತೆ ಸೂಚಿಸುತ್ತಿದ್ದ. ಪ್ರತಿಯಾಗಿ ಅವರಿಗೆ ಸಾವಿರಾರು ರೂಪಾಯಿ ಹಣ ನೀಡುತ್ತಿದ್ದ. ನಂತರ ಬ್ಯಾಂಕ್ ಖಾತೆ ಆಧಾರದ ಮೇಲೆ ವಿವಿಧ ಕಂಪೆನಿಯ ಸಿಮ್ಗಳನ್ನ ಖರೀದಿಸುವಂತೆ ಮಾಡುತ್ತಿದ್ದ ಆರೋಪಿ, ಬಳಿಕ ಸಿಮ್ ಹಾಗೂ ಡೆಬಿಟ್ ಕಾರ್ಡ್ಗಳನ್ನು ಕೋರಿಯರ್ನಲ್ಲಿ ಕಳಿಸುತ್ತಿದ್ದ.
ನಂತರ ಇವರೆಲ್ಲ ಸೇರಿಕೊಂಡು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಜನರಿಗೆ ಕರೆ ಮಾಡಿ ಕೆಲಸ ಕೊಡಿಸುತ್ತೇನೆ, ಲಾಟರಿ ಬಂದಿದೆ ಹಾಗೂ ಗಿಫ್ಟ್ ಬಂದಿರುವುದಾಗಿ ನಂಬಿಸಿ ಅವರಿಂದ ತಮ್ಮ ಬ್ಯಾಂಕ್ ಅಕೌಂಟ್ಗಳಿಗೆ ಹಣ ಹಾಕಿಸಿಕೊಂಡು ವಂಚಿಸುತ್ತಿದ್ದರು. ಸದ್ಯ ಪ್ರಾಥಮಿಕ ತನಿಖೆಯಲ್ಲಿ ಹತ್ತಾರು ಜನರಿಗೆ ವಂಚಿಸಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಸಂಬಂಧ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾದಕ ವಸ್ತು ಮಾರಾಟ: ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರ ಬಂಧನ