ಕರ್ನಾಟಕ

karnataka

ETV Bharat / state

ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಹಕ್ಕಲ್ಲ: ಹೈಕೋರ್ಟ್​ - ETV Bharath Karnataka

ಕುಟುಂಬದ ಸದಸ್ಯ ಸಂಸ್ಥೆಯೊಂದಲ್ಲಿ ಸೇವೆಯಲ್ಲಿದ್ದಾಗ ಅದೇ ಸಂಸ್ಥೆಯಲ್ಲಿ ಮತ್ತೊಬ್ಬ ಸದಸ್ಯರಿಗೆ ಅನುಕಂಪದ ಆಧಾರಲ್ಲಿ ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ತಿಳಿಸಿದೆ.

High Court of Karnataka
ಹೈಕೋರ್ಟ್​

By

Published : Jan 23, 2023, 6:03 PM IST

ಬೆಂಗಳೂರು: ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಹಕ್ಕಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕುಟುಂಬದ ಸದಸ್ಯರು ಈಗಾಗಲೇ ಒಂದು ಸಂಸ್ಥೆಯಲ್ಲಿ ನೌಕರರಾಗಿದ್ದಲ್ಲಿ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಂದು ಸದಸ್ಯರಿಗೆ ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.

ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ನೀಡಲು ನಿರಾಕರಿಸಿದ್ದ ಕರ್ನಾಟಕ ವಿದ್ಯುತ್ ಸರಬರಾಜು ಮಂಡಳಿ (ಕೆಪಿಟಿಸಿಎಲ್) ಕ್ರಮವನ್ನು ಎತ್ತಿ ಹಿಡಿದಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬೆಂಗಳೂರಿನ ಉಲ್ಲಾಳ ಮುಖ್ಯ ರಸ್ತೆಯ ನಿವಾಸಿ ರಂಗನಾಥ್ ಎಂಬುವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೇ, ಅರ್ಜಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದೀಗ ಅನುಕಂಪದ ಆಧಾರದಲ್ಲಿ ಮತ್ತೊಂದು ಹುದ್ದೆ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರಾದ ರಂಗನಾಥ್ ಅವರ ತಂದೆ ಎನ್. ರಾಮಯ್ಯ ಅವರು ಕೆಪಿಟಿಸಿಎಲ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ನಡುವೆ 2002ರ ಅಕ್ಟೋಬರ್ 7 ರಂದು ನಾಪತ್ತೆಯಾಗಿದ್ದರು. ಇದಾದ ಬಳಿಕ 2010ರಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿ ರಂಗನಾಥ್ ಅವರ ತಾಯಿ ಕೆಪಿಟಿಸಿಎಲ್‌ಗೆ ಮನವಿ ಮಾಡಿದ್ದರು. ಈ ಮನವಿಯನ್ನು ಕೆಪಿಟಿಸಿಎಲ್ ತಿರಸ್ಕರಿಸಿತ್ತು.

ನಂತರ ರಂಗನಾಥ್ ಅವರ ತಂದೆ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಲಯದಿಂದ ದಾವೆ ಹೂಡಿದ್ದರು. ಈ ಕುರಿತ ವಿಚಾರಣೆ ನಡೆಸಿದ್ದ ಸಿವಿಲ್ ನ್ಯಾಯಾಲಯ ಅರ್ಜಿದಾರರ ತಂದೆಯ ಮರಣ ಪ್ರಮಾಣ ನೀಡುವಂತೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ನಿರ್ದೇಶಿಸಿತ್ತು. ಅದರಂತೆ ಬಿಬಿಎಂಪಿ ರಾಮಯ್ಯ ಅವರ ಹೆಸರಿನಲ್ಲಿ 2011ರಲ್ಲಿ ಮರಣ ಪ್ರಮಾಣ ಪತ್ರ ನೀಡಿತ್ತು.

2012ರಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ರಂಗನಾಥ್, ಅನುಕಂಪದ ಆಧಾರದಲ್ಲಿ ತಂದೆಯ ಹುದ್ದೆಗೆ ನೇಮಕ ಮಾಡಿಕೊಳ್ಳುವಂತೆ ಕೆಪಿಟಿಸಿಎಲ್‌ಗೆ ಸೂಚನೆ ನೀಡಬೇಕು ಎಂದು ಕೋರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿದಾರರ ಮನವಿಯನ್ನು ಕಾನೂನು ಪ್ರಕಾರದಲ್ಲಿ ಪರಿಗಣಿಸಬೇಕು ಎಂದು ಕೆಪಿಟಿಸಿಎಲ್‌ಗೆ ನಿರ್ದೇಶನ ನೀಡಿತ್ತು. ರಂಗನಾಥ್ ಕುಟುಂಬದ ಸದಸ್ಯರು ಇದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿತ್ತಿದ್ದು, ಮತ್ತೊಬ್ಬರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ತಿಳಿಸಿ ಮನವಿಯನ್ನು 2013ರಲ್ಲಿ ಕೆಪಿಟಿಸಿಎಲ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ರಂಗನಾಥ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ:ಅರ್ಜಿವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕೆಪಿಟಿಸಿಎಲ್‌ನ ನಿರ್ಣಯವನ್ನು ಎತ್ತಿಹಿಡಿದು ಅರ್ಜಿಯನ್ನು 2014ರಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಂಗನಾಥ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ದಾಖಲೆಗಳೊಂದಿಗೆ ಸತ್ಯಾಸತ್ಯತೆಗಳನ್ನು ಪರಿಗಣಿಸಿಯೇ ಏಕ ಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ. ಹೀಗಾಗಿ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ. ಜೊತೆಗೆ, ಏಕಸದಸ್ಯ ಪೀಠದ ಆದೇಶದಲ್ಲಿ ಯಾವುದೇ ದೋಷಗಳು ಕಂಡು ಬರುವುದಿಲ್ಲ ಎಂದು ತಿಳಿಸಿ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ:ಹಿಜಾಬ್​ ಪ್ರಕರಣದ​ ವಿಚಾರಣೆಗೆ ಸುಪ್ರೀಂ ಕೋರ್ಟ್​ ಒಪ್ಪಿಗೆ: ಶೀಘ್ರವೇ ದಿನಾಂಕ ನಿಗದಿ

ABOUT THE AUTHOR

...view details