ಬೆಂಗಳೂರು : 2023-24ರ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ತಿಂಗಳ ಜೂನ್ 30 ರವರೆಗೆ ಸಾರ್ವತ್ರಿಕ ವರ್ಗಾವಣೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಈ ಮುಂಚೆ 2023- 24ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗಳನ್ನು ಜೂ. 15 ರವರೆಗೆ ಕೈಗೊಳ್ಳಲು ಆದೇಶಿಸಲಾಗಿತ್ತು. ಇದೀಗ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ಮತ್ತೆ ವಿಸ್ತರಿಸುವುದು ಅವಶ್ಯವೆಂದು ಪರಿಗಣಿಸಿ ಸರ್ಕಾರ ಈ ಆದೇಶ ನೀಡಿದೆ.
ಹೀಗಾಗಿ 2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಿ ಆದೇಶಿಸಿದೆ. 2023-24ನೇ ಸಾಲಿಗೆ ಗ್ರೂಪ್ ಎ, ಗ್ರೂಪ್-ಬಿ, ಗ್ರೂಪ್-ಸಿ ಮತ್ತು ಗ್ರೂಪ್-ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ವರ್ಗಾವಣೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಸರ್ಕಾರಿ ನೌಕರರ ವರ್ಗಾವಣೆ ಕುರಿತಂತೆ ವಿಸ್ಕೃತವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಮಾರ್ಗಸೂಚಿಗಳ ಪ್ರಕಾರ ಸರ್ಕಾರಿ ನೌಕರರ ವರ್ಗಾವಣೆಗಳನ್ನು ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ ಮಾತ್ರ ಮಾರ್ಗಸೂಚಿಗಳಲ್ಲಿರುವ ಷರತ್ತುಗಳಿಗೊಳಪಟ್ಟು ಮಾಡಬಹುದಾಗಿದೆ. ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ನೀಡಲಾಗಿದೆ.
ಜೂ.1 ರಿಂದ ಜೂ.30 ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖಾ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಾರ್ವತ್ರಿಕ ವರ್ಗಾವಣೆ ಮಾಡಲಾಗುತ್ತಿದೆ. ವರ್ಗಾವಣೆಗೆ ಆಯಾಯ ಇಲಾಖಾ ಸಚಿವರುಗಳಿಗೆ ಅಧಿಕಾರ ನೀಡಲಾಗಿದೆ.
10 ಮಂದಿ IAS ಅಧಿಕಾರಿಗಳ ವರ್ಗಾವಣೆ : ಮತ್ತೊಂದೆಡೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಪೂರ್ಣಗೊಂಡಿಲ್ಲ. ಅದಾಗಲೇ ಅಧಿಕಾರಿಗಳ ವರ್ಗಾವಣೆ ಪರ್ವ ಆರಂಭವಾಗಿದೆ. ಇಂದೂ ಸಹ 10 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
- ಪಲ್ಲವಿ ಆಕುರಾತಿ- ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್.
- ಡಾ. ವೆಂಕಟೇಶ್ ಎಂ.ವಿ.- ಆಯುಕ್ತ, ಪಶುಸಂಗೋಪನಾ ಇಲಾಖೆ.
- ರವೀಂದ್ರ ಪಿ.ಎನ್.- ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ.
- ಶ್ರೀನಿವಾಸ್ ಕೆ.- ಜಿಲ್ಲಾಧಿಕಾರಿ, ತುಮಕೂರು.
- ಜಾನಕಿ ಕೆ.ಎಂ.- ಜಿಲ್ಲಾಧಿಕಾರಿ, ಬಾಗಲಕೋಟೆ.
- ಮುಲ್ಲೈ ಮುಹಿಲನ್– ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ.
- ಯೋಗೇಶ್ ಎ.ಎಂ.- ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ.
- ಡಾ. ಕುಮಾರ್, ಜಿಲ್ಲಾಧಿಕಾರಿ, ಮಂಡ್ಯ ಜಿಲ್ಲೆ.
- ಪ್ರಭು ಜಿ.- ಆಯುಕ್ತರು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ.
- ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ.
ಎಲ್ಲ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಸಂಪರ್ಕ ಸಂಖ್ಯೆ ಡಿಸ್‌ಪ್ಲೇ ಕಡ್ಡಾಯ :ರಾಜ್ಯದ ಎಲ್ಲಪೊಲೀಸ್ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಸಂಪರ್ಕ ಸಂಖ್ಯೆಯ ಡಿಸ್‌ಪ್ಲೇ ಹಾಕಲು ಕಡ್ಡಾಯಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಆದೇಶಿಸಿದ್ದಾರೆ. ಠಾಣೆಯಲ್ಲಿ ಯಾವುದೇ ದೂರು ಸ್ವೀಕರಿಸದಿದ್ದಲ್ಲಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ಸೂಚಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ನಗರದ ಪ್ರತಿ ಪೊಲೀಸ್ ಠಾಣೆಯಲ್ಲಿ ಕಮಿಷನರ್, ಡಿಸಿಪಿ, ಎಸಿಪಿಗಳ ನಂಬರ್ ಹಾಗೂ ಜಿಲ್ಲೆಗಳಲ್ಲಿ ಎಸ್.ಪಿ, ಎಎಸ್.ಪಿ, ಡಿವೈಎಸ್.ಪಿಯವರ ಸಂಪರ್ಕ ಸಂಖ್ಯೆಯನ್ನು ಫಲಕದಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಯಲ್ಲಿ ಮುದ್ರಿಸಿರಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ನೂತನ ಆದೇಶದನ್ವಯ ಎರಡು ದಿನಗಳಲ್ಲಿ ಫಲಕ ಹಾಕಿರುವುದರ ಕುರಿತು ವರದಿಯನ್ನು ಡಿಜಿ & ಐಜಿಪಿಯವರ ಕಚೇರಿಗೆ ಕಳಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ :2023-24 ಸಾಲಿನ ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ