ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮಾಜಿ ಸಿಎಂ ಸಿದ್ದರಾಮಯ್ಯರ ವಿರುದ್ಧ ಸಿಟ್ಟನ್ನು ತೀರಿಸಿಕೊಳ್ಳಲಾಗದೆ, ಸಾಮಾನ್ಯ ಕಾರ್ಯಕರ್ತನಿಗೆ ಹೊಡೆದು ತೀರಿಸಿಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಮೇಲಿನ ಕೋಪವನ್ನು ಡಿಕೆಶಿ ಕಾರ್ಯಕರ್ತನ ಮೇಲೆ ಪ್ರದರ್ಶಿಸಿದ್ದಾರೆ: ರವಿಕುಮಾರ್ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತನಿಗೆ ಡಿಕೆಶಿ ಹಲ್ಲೆ ಮಾಡಿ ಕಾಂಗ್ರೆಸ್ ರಾಜ್ಯದಲ್ಲಿ ರೌಡಿ ಪಾರ್ಟಿ ಆಗಿದೆ. ಕರ್ನಾಟಕದಂಥ ಸುಸಂಸ್ಕೃತ ರಾಜ್ಯಕ್ಕೆ ಕೊತ್ವಾಲನ ಶಿಷ್ಯನಾಗಿದ್ದ ಡಿಕೆಶಿಯನ್ನು ಅಧ್ಯಕ್ಷ ಮಾಡಿರುವುದು ದುರಂತ. ಯುವ ಘಟಕದ ಸದಸ್ಯ ನಲಪಾಡ್ ಹಲ್ಲೆ ಬಗ್ಗೆ ದೂರು ಸಲ್ಲಿಸಿದ್ದರು. ಅದನ್ನು ಇನ್ನೂ ಮರೆತಿಲ್ಲ ಎಂದು ಕಿಡಿಕಾರಿದರು.
ನಿನ್ನೆ ಸೆಲ್ಫಿ ತೆಗೆಯಲು ಹೋದ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಿಮ್ಮ ಸಿಟ್ಟನ್ನು ಸಿದ್ದರಾಮಯ್ಯ ವಿರುದ್ಧ ತೀರಿಸಲು ಆಗೋದಿಲ್ಲ. ಅದಕ್ಕೆ ಕಾರ್ಯಕರ್ತನೊಬ್ಬನ ಮೇಲೆ ಸಿಟ್ಟು ತೀರಿಸಿಕೊಂಡ್ರಾ ಎಂದು ಲೇವಡಿ ಮಾಡಿದ್ದಾರೆ.
ಸಾಮಾನ್ಯ ಕಾರ್ಯಕರ್ತನ ಮೇಲೆ ಸಿಟ್ಟು ತೀರಿಸಿಕೊಳ್ಳುವುದು ಒಳ್ಳೆಯ ಅಧ್ಯಕ್ಷನ ನಡವಳಿಕೆ ಅಲ್ಲ. ಡಿಕೆಶಿ ನಲಪಾಡ್ನ ರಕ್ಷರಾಗಿದ್ದಾರೆ. ನಲಪಾಡ್ ಮಾಡಿರುವ ದೌರ್ಜನ್ಯದ ರಕ್ಷಕರಾಗಿ ಡಿಕೆಶಿ ವರ್ತಿಸುತ್ತಿದ್ದಾರೆ. ಡಿಕೆಶಿ ಕಾಂಗ್ರೆಸ್ ಪಾರ್ಟಿಗೆ ಒಳ್ಳೆಯ ಕೆಲಸ ಮಾಡುತ್ತಿದ್ದಾರಾ? ಕೆಟ್ಟ ಹೆಸರು ತರುತ್ತಿದ್ದಾರಾ? ಎಂಬ ಬಗ್ಗೆ ರಾಹುಲ್ ಗಾಂಧಿ ವರದಿ ತರಿಸಬೇಕು ಎಂದರು.
ಇದನ್ನೂ ಓದಿ:ಹೆಗಲ ಮೇಲೆ ಕೈ ಹಾಕಲು ಮುಂದಾದ ಕಾರ್ಯಕರ್ತ: ತಲೆಗೆ ಬಾರಿಸಿದ ಡಿಕೆಶಿ!
ಅಧಿಕಾರಕ್ಕೆ ಬರುವ ಮೊದಲೇ ಸಿಎಂ ಯಾರಾಗಬೇಕು ಎಂಬ ಬಗ್ಗೆ ಸಮರ ಶುರುವಾಗಿದೆ. ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟಿರೋದು ಸರಿನಾ? ಇದರಿಂದ ಡಿಕೆಶಿಯ ವ್ಯಕ್ತಿತ್ವದ ಅನಾವರಣ ಆಗಿದೆ. ಅಧಿಕಾರ ಬರದೇ ಈ ರೀತಿ ಅಟ್ಟಹಾಸ ಮೆರೆಯುವುದು ಸರಿಯಲ್ಲ. ಡಿಕೆಶಿ ವಿರುದ್ಧ ರಾಹುಲ್ ಗಾಂಧಿ ಕ್ರಮ ಕೈಗೊಳ್ಳಬೇಕೆಂದು ರವಿಕುಮಾರ್ ಆಗ್ರಹಿಸಿದ್ರು.
ಇದನ್ನೂ ಓದಿ : ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?.. ಡಿಕೆಶಿ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್