ಬೆಂಗಳೂರು: ಪುನೀತ್ ಅವರ 1ನೇ ವರ್ಷದ ಪುಣ್ಯ ಸ್ಮರಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಕುಟುಂಬಸ್ಥರಿಂದ ಪೂಜೆ ನಡೆಯಲಿದೆ. ಲಕ್ಷಾಂತರ ಜನರಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿದೆ. ಇವತ್ತು ಗಂಧದಗುಡಿ ರಿಲೀಸ್ ಆಗಿದ್ದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧುಕೋಕಿಲ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.
ಗೀತ ನಮನ ಕಾರ್ಯಕ್ರಮ: ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12ರ ತನಕ ನಡೆಯಲಿರುವ ಗೀತ ನಮನ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸಾಧುಕೋಕಿಲ, ವಿಜಯ್ ಪ್ರಕಾಶ್, ಗುರುಕಿರಣ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವು ಗಾಯಕರು ಹಾಡಲಿದ್ದಾರೆ. ಇನ್ನೊಂದೆಡೆ, ವಿಶ್ವದಾಖಲೆ ಬರೆಯಲು ಸಿದ್ಧವಾಗಿರುವ ಅಪ್ಪು ಅಭಿಮಾನಿಗಳು ಕಂಠೀರವ ಸ್ಟುಡಿಯೋ ಮುಂಭಾಗದಲ್ಲಿ 75 ಕಟೌಟ್ ಹಾಕಿಸಿದ್ದಾರೆ. ಒಂದು ಕಿಲೋಮೀಟರ್ ತನಕ ಲೈಟಿಂಗ್ ವ್ಯವಸ್ಥೆಯಾಗಿದೆ.
ಸುಮಾರು 100 ಗಾಯಕರಿಂದ ಕಾರ್ಯಕ್ರಮ: ಸಂಗೀತ ನಿರ್ದೇಶಕ, ನಟ ಸಾಧು ಕೋಕಿಲಾ ಮಾತನಾಡಿ, ಅಪ್ಪುಗೆ 24 ಗಂಟೆಗಳ ಗೀತ ನಮನ ಕಾರ್ಯಕ್ರಮ ಏರ್ಪಾಡಾಗಿದೆ. ಕನ್ನಡ ಫಿಲ್ಮ್ ಮೂಜಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ನಮನ ಸಲ್ಲಿಸಲಾಗುತ್ತದೆ. ಸಿನಿ ಕಲಾವಿದರು ಸೇರಿ ಗಾಯಕರು ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಜಯ್ ವಾರಿಯರ್, ಶ್ರೀ ಹರ್ಷ, ಹರಿ ಕೃಷ್ಣ, ರವಿ ಶಂಕರ್ ಗೌಡ ಸೇರಿ 100 ಗಾಯಕರ ಉಪಸ್ಥಿತಿ ಇರಲಿದೆ. ಡಾ.ರಾಜ್‌ಕುಮಾರ್, ಅಪ್ಪು ಹಾಡುಗಳು ಹಾಗೂ ಭಾವ ಗೀತೆಗಳನ್ನು ಹಾಡಲಾಗುತ್ತದೆ ಎಂದು ಹೇಳಿದರು.