ಬೆಂಗಳೂರು: ಲಂಚ ಮಂಚ ಸರ್ಕಾರ ಎನ್ನುವ ಹೇಳಿಕೆ ನೀಡಿ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವಮಾನ ಮಾಡಿದ್ದಾರೆ. ಹಾಗಾಗಿ ಅವರು ಕ್ಷಮೆ ಕೇಳಬೇಕು. ಒಂದು ವೇಳೆ ಅವರು ಕ್ಷಮೆ ಕೇಳದಿದ್ದರೆ ಚಿತ್ತಾಪುರ ಚಲೋ ಮಾಡಿ ಅವರ ಮನೆ, ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಎಚ್ಚರಿಕೆ ನೀಡಿದ್ದಾರೆ.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಕೆಲ ದಿನಗಳ ಹಿಂದೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಲಂಚ, ಮಂಚ ಸರ್ಕಾರ ಅಂತ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆಯನ್ನು ಖಂಡಿಸಿ 17 ಜಿಲ್ಲೆಗಳಲ್ಲಿ ಕ್ಷಮಾಪಣೆಗೆ ಆಗ್ರಹಿಸಿದ್ದೆವು. ಸರ್ಕಾರಿ ಹುದ್ದೆಯಲ್ಲಿರುವ ಮಹಿಳೆಯರ ಕ್ಷಮಾಪಣೆ ಕೇಳಲು ಆಗ್ರಹಿಸಿದ್ದೆವು. ಆದರೆ, ಅವರು ಈವರೆಗೂ ಕ್ಷಮಾಪಣೆ ಕೇಳಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.