ಬೆಂಗಳೂರು: ಸ್ಮಾರ್ಟ್ ಸಿಟಿ ಕಾಮಗಾರಿಗಳ ವೇಗ ಕುಂಠಿತಗೊಂಡಿದೆ. ರಸ್ತೆಗುಂಡಿಗಳ ಜೊತೆಗೆ ಮಳೆ ಬಂದಾಗ ರಸ್ತೆಕಾಮಗಾರಿಗಳೂ ವಾಹನ ಸಂಚಾರಕ್ಕೆ ತೊಡಕಾಗುತ್ತಿವೆ. ಕಾಮಗಾರಿಗಳಿಗೆ ನೀಡಿದ್ದ ಡೆಡ್ ಲೈನ್ ಈಗಾಗಲೇ ಮುಗಿದಿದ್ದು, ಈ ಸಂಬಂಧ ಮಾತನಾಡಿರುವ ಮುಖ್ಯ ಆಯುಕ್ತ ಗೌರವ್ ಗುಪ್ತ, ಸ್ಮಾರ್ಟ್ ಸಿಟಿ ರಸ್ತೆ, ಚರಂಡಿ ಕಾಮಗಾರಿಗಳಿಗೆ ವೇಗ ನೀಡುವ ಕುರಿತು ಸ್ಮಾರ್ಟ್ ಸಿಟಿ ಲಿಮಿಟೆಡ್ ಗೆ ಪತ್ರ ಬರೆಯಲಾಗಿದೆ ಎಂದಿದ್ದಾರೆ.
ಸದ್ಯದಲ್ಲೇ ಸಭೆ ನಡೆಸಲಾಗುತ್ತದೆ. ಯೋಜನೆಗಳನ್ನು ಸಮಯಕ್ಕೆ ತಕ್ಕಂತೆ ಮುಗಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಅದಕ್ಕಾಗಿ ಪತ್ರ ಬರೆಯಲಾಗಿದೆ ಎಂದ ಅವರು, ಕಾರಣಾಂತರಗಳಿಂದ ಯೋಜನೆಗಳ ಕೊಟೇಶನ್ ಪೂರ್ಣಗೊಂಡಿಲ್ಲ. ಚರಂಡಿ ಹಾಗೂ ಕುಡಿಯುವ ನೀರಿನ ಹಳೇ ಕನೆಕ್ಷನ್ ಗಳನ್ನು ಹೊಸ ಕನೆಕ್ಷನ್ ಗೆ ಬದಲಾವಣೆ ಮಾಡಿಲ್ಲ. ಇದರಿಂದ ಮಳೆ ಬಂದಾಗ ತಕ್ಷಣ ಸಮಸ್ಯೆ ಉದ್ಭವಿಸುತ್ತಿದೆ. ಈ ಎಲ್ಲ ಸಮಸ್ಯೆಗಳನ್ನೂ ಸರಿಪಡಿಸುವಂತೆ ಸ್ಮಾರ್ಟ್ ಸಿಟಿ ವಿಭಾಗಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.
ಸತತವಾದ ಮಳೆಯಿಂದಾಗಿ ಶಿಥಿಲ ಮನೆಗಳು ಕುಸಿಯುತ್ತಿವೆ. ಹೀಗಾಗಿ ಎಲ್ಲ ವಲಯ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಪಾಯಕಾರಿ ಕಟ್ಟಡದಲ್ಲಿರುವವರನ್ನು ಖಾಲಿ ಮಾಡಿಸಲು ತಿಳಿಸಲಾಗಿದೆ. ಅಲ್ಲದೇ, ಅಕ್ಕಪಕ್ಕದ ಕಟ್ಟಡಗಳಿಗೆ ತೊಂದರೆಯಾಗುವಂತಿದ್ದರೆ, ಶಿಥಿಲ ಕಟ್ಟಡವನ್ನು ಕೂಡಲೇ ನೆಲಸಮಗೊಳಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.