ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳ ಕುರಿತು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ನಗರದ ಕೇಂದ್ರಭಾಗದಲ್ಲಿರುವ ಚಾಲುಕ್ಯ(ಬಸವೇಶ್ವರ ವೃತ್ತ) ವೃತ್ತದ ಬಳಿಯ ರಾಜಭವನ ರಸ್ತೆ ಸೇರಿದಂತೆ ಇನ್ನಿತರೆ 14 ಪ್ರಮುಖ ರಸ್ತೆಗಳನ್ನು 200 ಕೋಟಿ ರೂ. ವೆಚ್ಚದಲ್ಲಿ, ಸ್ಮಾರ್ಟ್ ಸಿಟಿ ಯೋಜನೆಯಡಿ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿಗಳು ಮಂದಗತಿಯಲ್ಲಿ ಸಾಗುತ್ತಿದ್ದು, ಅದಕ್ಕೆ ವೇಗ ನೀಡಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗೌರವ್ ಗುಪ್ತಾ ಸೂಚನೆ ನೀಡಿದರು. ರೇಸ್ ಕೋರ್ಸ್ ರಸ್ತೆ, ಇನ್ಫೆಂಟ್ರಿ ರಸ್ತೆ, ನೆಹರು ಪ್ಲಾನಿಟೋರಿಯಂ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳನ್ನು ವೀಕ್ಷಣೆ ಮಾಡಲಾಗಿದ್ದು, ಹಲವಾರು ಕಾರಣಗಳಿಂದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ.
ಆಡಳಿತಾಧಿಕಾರಿ ಗೌರವ್ ಗುಪ್ತಾರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ ನಂತರ ಮಾತನಾಡಿದ ಆಡಳಿತಾಧಿಕಾರಿ ಗೌರವ್ ಗುಪ್ತಾ, ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಕಾಮಗಾರಿ ನಡೆಸುತ್ತಿರುವ ಕಡೆ ಚರಂಡಿ, ಪಾದಚಾರಿ ರಸ್ತೆ, ದುರಸ್ತಿ, ಕಾಮಗಾರಿ ವಿಳಂಬ, ವಿನ್ಯಾಸ, ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳಿರುವುದರಿಂದ ಕೆಲಸ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಎಂಜಿನಿಯರ್ ಗಳು ತಿಳಿಸಿದ್ದಾರೆ. ಈ ಬಗ್ಗೆ ಪರಿಹಾರ ಕಂಡುಕೊಂಡು ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸುವ ಯೋಜನೆ ರೂಪಿಸಲಾಗುವುದು ಎಂದರು.
ನಗರದ ಮಧ್ಯಭಾಗದಲ್ಲಿರುವ ರಸ್ತೆಗಳನ್ನು, ರೇಸ್ ಕೋರ್ಸ್, ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳನ್ನು ಪರಿಶೀಲನೆ ಮಾಡಲಾಯಿತು. ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ. ಕಾರಣಗಳನ್ನು ಕೊಡುವ ಬದಲು, ಪರಿಹಾರ ಹುಡುಕಬೇಕಾಗಿದೆ. ನಗರದ ನಾಗರೀಕರು ಹಾಗೂ ವಾಹನ ಸವಾರರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನೋಡಿಕೊಳ್ಳಬೇಕು. ಗುತ್ತಿಗೆದಾರರು ಸರಿಯಾಗಿ ಕಾಮಗಾರಿ ಕೆಲಸ ಮಾಡದಿದ್ದರೆ ಹಾಗೂ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ಅಂತಹವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಎಂಜಿನಿಯರ್ಸ್ ಗೆ ಅವಧಿಯೊಳಗೆ ಕೆಲಸ ಮಾಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರಗತಿ ಪರಿಶೀಲನೆ ವೇಳೆ ವಿಶೇಷ ಆಯುಕ್ತರು(ಯೋಜನೆ) ಮನೋಜ್ ಜೈನ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಪೂರ್ವ ವಲಯ ಮುಖ್ಯ ಅಭಿಯಂತರರಾದ ಪ್ರಭಾಕರ್ ಸಾಥ್ ನೀಡಿದರು.