ಕರ್ನಾಟಕ

karnataka

ETV Bharat / state

ಗತಿ ಶಕ್ತಿ ಯೋಜನೆ.. ಸ್ಥಳೀಯ ಉತ್ಪಾದಕರಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ.. ಸಚಿವ ವಿ.ಸೋಮಣ್ಣ - ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ

ರಾಜ್ಯ ಹಾಗೂ ಅಂತಾರಾಜ್ಯ ರೈಲು ಮಾರ್ಗಗಳ ನಿರ್ಮಾಣ ವೆಚ್ಚದಲ್ಲಿ ಶೇ.50ರಷ್ಟು ಭಾಗವನ್ನು ರಾಜ್ಯ ಸರ್ಕಾರ ಭರಿಸುವುದಲ್ಲದೆ, ಅಗತ್ಯ ಭೂಮಿಯನ್ನು ಉಚಿತವಾಗಿ ನೀಡುತ್ತದೆ. 9 ಹೊಸ ರೈಲು ಮಾರ್ಗಗಳ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. ಬಂದರು ಹಾಗೂ ಜಲ ಸಾರಿಗೆ ಅಭಿವೃದ್ಧಿ ಮೂಲಕ ಆರ್ಥಿಕ ಹಾಗೂ ಔದ್ಯಮಿಕ ಪ್ರಗತಿ ಹೆಚ್ಚಲಿದೆ ಎಂದು ವಿವರಿಸಿದರು..

ಸಚಿವ ವಿ.ಸೋಮಣ್ಣ
ಸಚಿವ ವಿ.ಸೋಮಣ್ಣ

By

Published : Oct 13, 2021, 7:20 PM IST

ಬೆಂಗಳೂರು :ನಗರದ ಖಾಸಗಿ ಹೋಟೆಲ್‍ನಲ್ಲಿ ಗತಿ ಶಕ್ತಿ ಯೋಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ರಾಜ್ಯ ಸರಕಾರದ ಪರವಾಗಿ ಪಾಲ್ಗೊಂಡು, ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದರು.

ಈ ವೇಳೆ ಮಾತನಾಡಿದ ಅವರು, ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯ ಮೂಲಕ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯು ದೇಶದ ಪ್ರಗತಿಯ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಲ್ಲಿ ಮತ್ತು ಮೂಲಸೌಕರ್ಯದ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಈ ಯೋಜನೆಯ ಮೂಲಕ ಸ್ಥಳೀಯ ಉತ್ಪಾದಕರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ಗುರಿ ಇದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೆ ಕಾರಣವಾಗಲಿದೆ ಎಂದರು. ಕೊರೊನಾ, ಲಾಕ್‌ಡೌನ್‌ನಿಂದ ಹಳಿ ತಪ್ಪಿದ್ದ ದೇಶದ ಆರ್ಥಿಕತೆ ಮತ್ತೆ ನಿಧಾನಗತಿಯಲಿ ಹಳಿಗೆ ಮರಳುತ್ತಿದೆ.

ಅದಕ್ಕೆ ಮತ್ತಷ್ಟು ಉತ್ತೇಜನ ನೀಡಲು, 'ಗತಿಶಕ್ತಿ' ಯೋಜನೆ ಪೂರಕವಾಗಿದೆ. 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಮಾಸ್ಟರ್ ಪ್ಲಾನ್ ಇದಾಗಿದೆ. ದೇಶದ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿದೆ. ಜತೆಗೆ ಲಾಜಿಸ್ಟಿಕ್‌ ವೆಚ್ಚವನ್ನೂ ತಗ್ಗಿಸಲಿದೆ.

ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ಹಾಗೂ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಯೋಜನೆಗೆ ಅನುಗುಣವಾಗಿ ರಾಜ್ಯದಲ್ಲಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಉತ್ತಮಗೊಳಿಸಲು ಕೇಂದ್ರ ಸರ್ಕಾರದೊಂದಿಗೆ ಕೈ ಜೋಡಿಸುತ್ತದೆ. ರಾಜ್ಯದ ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ವಲಯಗಳಲ್ಲಿ ವಿಮಾನ ನಿಲ್ದಾಣಗಳನ್ನ ನಿರ್ಮಿಸುವುದರಿಂದ ವಿವಿಧ ಆರ್ಥಿಕ ವಲಯಗಳಿಗೆ ತ್ವರಿತಗತಿಯ ಸಂಪರ್ಕ ದೊರೆಯಲಿದೆ.

ರಾಜ್ಯ ಹಾಗೂ ಅಂತಾರಾಜ್ಯ ರೈಲು ಮಾರ್ಗಗಳ ನಿರ್ಮಾಣ ವೆಚ್ಚದಲ್ಲಿ ಶೇ.50ರಷ್ಟು ಭಾಗವನ್ನು ರಾಜ್ಯ ಸರ್ಕಾರ ಭರಿಸುವುದಲ್ಲದೆ, ಅಗತ್ಯ ಭೂಮಿಯನ್ನು ಉಚಿತವಾಗಿ ನೀಡುತ್ತದೆ. 9 ಹೊಸ ರೈಲು ಮಾರ್ಗಗಳ ಯೋಜನೆಯನ್ನು ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗುತ್ತದೆ. ಬಂದರು ಹಾಗೂ ಜಲ ಸಾರಿಗೆ ಅಭಿವೃದ್ಧಿ ಮೂಲಕ ಆರ್ಥಿಕ ಹಾಗೂ ಔದ್ಯಮಿಕ ಪ್ರಗತಿ ಹೆಚ್ಚಲಿದೆ ಎಂದು ವಿವರಿಸಿದರು.

ದಾಬಸ್‌ಪೇಟೆಯಲ್ಲಿ ಲಾಜಿಸ್ಟಿಕ್‌ ಪಾರ್ಕ್‌ :ದಾಬಸ್‌ಪೇಟೆಯಲ್ಲಿ ಮಲ್ಟಿ ಮಾಡಲ್‌ ಲಾಜಿಸ್ಟಿಕ್‌ ಪಾರ್ಕ್‌ (ಎಂಎಂಎಲ್‌) ಅಭಿವೃದ್ಧಿಗೆ 400 ಎಕರೆ ಭೂಮಿ ಗುರುತಿಸಲಾಗಿದೆ. ದೇಶದ ಅತಿ ಹೆಚ್ಚು ಲಾಜಿಸ್ಟಿಕ್‌ ಜಾಲ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದ್ದು, ನೂತನ ಕೈಗಾರಿಕಾ ನೀತಿಯ ಅನುಸ್ಠಾನದ ಮೂಲಕ ಮೊದಲ ಸ್ಥಾನಕ್ಕೇರುವುದು ನಮ್ಮ ಗುರಿ"ಎಂದರು.

ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಡಾ. ಇವಿ ರಣಮಣರೆಡ್ಡಿ, ಕೆಐಎಡಿಬಿ ಸಿಇಓ ಡಾ.ಎನ್‌ ಶಿವಶಂಕರ್‌, ಇನ್ವೆಸ್ಟ್‌ ಕರ್ನಾಟಕದ ಸಿಓಓ ಬಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು.

ಏನಿದು ಗತಿಶಕ್ತಿ ಯೋಜನೆ? :100 ಲಕ್ಷ ಕೋಟಿ ಗತಿಶಕ್ತಿ ಉಪಕ್ರಮವು ಸಮಗ್ರ ಮೂಲಸೌಕರ್ಯ ಬೆಳವಣಿಗೆಗೆ ಪೂರಕವಾಗಿದೆ. ವಿವಿಧ ಆರ್ಥಿಕ ವಲಯಗಳಿಗೆ ಬಹುಮುಖ ಸಂಪರ್ಕ ಕಲ್ಪಿಸುವ ಯೋಜನೆಯಾಗಿದೆ. ಇದು ರೈಲ್ವೆ, ರಸ್ತೆಗಳು ಮತ್ತು ಹೆದ್ದಾರಿಗಳು, ಪೆಟ್ರೋಲಿಯಂ ಮತ್ತು ಅನಿಲ, ವಿದ್ಯುತ್, ದೂರಸಂಪರ್ಕ, ಹಡಗು, ವಾಯುಯಾನ ಮತ್ತು ಕೈಗಾರಿಕಾ ಪಾರ್ಕ್ ಇಲಾಖೆಗಳು ಸೇರಿ ಕೇಂದ್ರ ಸರ್ಕಾರದ 16 ಇಲಾಖೆಗಳು ಒಳಗೊಳ್ಳಲಿವೆ.

ಕೇಂದ್ರದ ಎಲ್ಲಾ 16 ಇಲಾಖೆಗಳ ಉನ್ನತ ಅಧಿಕಾರಿಗಳ ನೆಟ್‌ವರ್ಕ್‌ ಪ್ಲಾನಿಂಗ್ ಗ್ರೂಪ್ ಸಹ ರಚಿಸಲಾಗುತ್ತಿದೆ. 100 ಲಕ್ಷ ಕೋಟಿಯ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆ ಆರಂಭಿಸವುದಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ABOUT THE AUTHOR

...view details