ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಶಾಲೆಗಳಲ್ಲಿ ಟಿಇಟಿ ಅರ್ಹತೆ ಉಲ್ಲೇಖಿಸಿ ಹಲವು ಶಿಕ್ಷಕರನ್ನು ಹೊರ ಕಳುಹಿಸುತ್ತಿರುವ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಹೊರಗುತ್ತಿಗೆ ಶಿಕ್ಷಕರ ಹಿತ ಕಾಪಾಡಬೇಕೆಂದು ಹಲವು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ಪಾಲಿಕೆಯ ಅಡಿಯಲ್ಲಿ 163 ಶಾಲಾ, ಕಾಲೇಜುಗಳಿದ್ದು 840 ಬೋಧಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಬರೀ 110 ಕಾಯಂ ಬೋಧಕರಿದ್ದರೆ, 720 ಹೊರಗುತ್ತಿಗೆ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇದೀಗ ಟಿಇಟಿ ಪರೀಕ್ಷೆಯ ನೆಪ ಹೇಳಿ ಕಳೆದ ಒಂದು ದಶಕಗಳಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಬಿಬಿಎಂಪಿ ಮನೆಗೆ ಕಳುಹಿಸಲು ಮುಂದಾಗಿರುವುದು ಸರಿಯಲ್ಲ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಡಿಮೆ ಫಲಿತಾಂಶದ ಕಾರಣ ನೀಡಿ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿ ಅವರ ಬದುಕನ್ನು ದುಸ್ಥಿಗೆ ತಳ್ಳಲು ಹೊರಟಿದೆ. ಕಡಿಮೆ ಫಲಿತಾಂಶಕ್ಕೆ ಹೊರಗುತ್ತಿಗೆ ನೌಕರರೇ ಕಾರಣವೆಂಬ ಆರೋಪ ಸರಿಯಲ್ಲ. ಈವರೆಗೂ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
160ಕ್ಕೂ ಹೆಚ್ಚು ಶಿಕ್ಷಕರಿಗೆ ಸಮಸ್ಯೆ:ಪಾಲಿಕೆಯು ಕಳೆದ ವರ್ಷವೇ ಅನರ್ಹ ಹೊರಗುತ್ತಿಗೆ ಶಿಕ್ಷಕರನ್ನು ಕೈಬಿಡಲು ಮುಂದಾಗಿತ್ತು. ಆದರೆ ಶಿಕ್ಷಕರು ಕಾಲಾವಕಾಶ ಕೇಳಿದ ಹಿನ್ನೆಲೆ ಒಂದು ವರ್ಷಗಳ ಕಾಲ ಮುಂದೂಡಲಾಗಿತ್ತು. ಆದರೆ ಈಗ ಪಾಲಿಕೆಯು ದಾಖಲಾತಿಗಳ ಪರಿಶೀಲನೆಗೆ ಮುಂದಾಗಿದ್ದು, ನೇಮಕಾತಿ ಪರಿಶೀಲನೆ ವೇಳೆ ಟಿಇಟಿ ಸರ್ಟಿಫಿಕೇಟ್ ಪರಿಶೀಲನೆ ಮಾಡಲಾಗುತ್ತದೆ. ಪ್ರೌಢಶಾಲೆ ಹಾಗೂ ಕಾಲೇಜಿಗೂ ಕೂಡ, ಬೇಕಾದ ಅರ್ಹತೆಯಿಲ್ಲದಿದ್ದರೆ ಕೈ ಬಿಡಲಾಗುತ್ತದೆ. ಪಾಲಿಕೆಯ ಶಾಲಾ ಕಾಲೇಜುಗಳಲ್ಲಿರುವ 160ಕ್ಕೂ ಅಧಿಕ ಶಿಕ್ಷಕರು ಅರ್ಹತೆ ಹೊಂದಿಲ್ಲ. ಹೀಗಾಗಿ ಪಾಲಿಕೆಯು ಅನರ್ಹ ಶಿಕ್ಷಕರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದ್ದರಿಂದ 163 ಶಾಲಾ ಕಾಲೇಜುಗಳಲ್ಲಿರುವ 160ಕ್ಕೂ ಅಧಿಕ ಶಿಕ್ಷಕರಿಗೆ ಸಮಸ್ಯೆಯಾಗಲಿದೆ.