ಬೆಂಗಳೂರು:ಚಿಲ್ಲರೆ ಮಾರುಕಟ್ಟೆಯಲ್ಲಿ ನಾಟಿ ಬೆಳ್ಳುಳ್ಳಿಯ ದರ ಒಂದು ಕೆಜಿಗೆ 400 ರೂಪಾಯಿ ತಲುಪಿದ್ದು, ಹೈಬ್ರಿಡ್ ಬೆಳ್ಳುಳ್ಳಿ ಧಾರಣೆಯು ಕೆಜಿಗೆ 300 ರೂಪಾಯಿ ದಾಟಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ನಗರದ ಯಶವಂತಪುರ ಈರುಳ್ಳಿ, ಆಲೂಗಡ್ಡೆ ಬೆಳ್ಳುಳ್ಳಿ ಮಾರುಕಟ್ಟೆಯಲ್ಲಿ ಮಧ್ಯಪ್ರದೇಶ ಮತ್ತು ಗುಜರಾತ್ನಿಂದ ನಿತ್ಯ ಮೂರು ಸಾವಿರದಿಂದ ನಾಲ್ಕು ಸಾವಿರ ಚೀಲದಷ್ಟು ಬೆಳ್ಳುಳ್ಳಿ ಬರುತ್ತಿತ್ತು. ಆದರೆ, ಈ ಬಾರಿ ನಿರೀಕ್ಷಿತ ಫಸಲು ಬರದ ಕಾರಣ ಉತ್ತಮ ದರ್ಜೆಯ ಹೈಬ್ರಿಡ್ ಬೆಳ್ಳುಳ್ಳಿ ದರ 260 ರೂಪಾಯಿಗೆ ಏರಿಕೆ ಕಂಡಿರುವುದರಿಂದ ರಿಟೇಲ್ ದರ ಕೂಡ ಹೆಚ್ಚಾಗಿದ್ದು, ಇದರಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆ ಕೊರತೆಯಿಂದ ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಜಿಲ್ಲೆಗಳಿಂದ ಪೂರೈಕೆಯಾಗುತ್ತಿದ್ದ ಬೆಳ್ಳುಳ್ಳಿ ಕಡಿಮೆಯಾಗಿದೆ. ಈ ಬಾರಿ ಮಧ್ಯಪ್ರದೇಶ ಮತ್ತು ಗುಜರಾತ್‌ನಲ್ಲಿ ಮಳೆ ಕೊರತೆಯಾಗಿದೆ. ಇದು ಬೆಳ್ಳುಳ್ಳಿ ಉತ್ಪಾದನೆಯ ಮೇಲೆ ಪರಿಣಾಮ ಬೀರಿ ಸಗಟು ಧಾರಣೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಪೂರೈಕೆ ಕಡಿಮೆ ಆಗಿರುವುದೇ ದರ ಹೆಚ್ಚಳಕ್ಕೆ ಮೂಲ ಕಾರಣವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಬೆಲೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆಯೂ ಇದೆ ಎಂದು ಯಶವಂತಪುರ ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.