ಬೆಂಗಳೂರು:ಈಗಾಗಲೇ ಗುತ್ತಿಗೆದಾರರ ಕಪಿಮುಷ್ಟಿಯಿಂದ ಬಿಡಿಸಿ, ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಪದ್ಧತಿ ಹಾಜರಾತಿ ಮತ್ತು ನೇರವೇತನ ನೀಡಲಾಗುತ್ತಿದೆ. ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಸರ್ಕಾರ ವೇತನ ಪಾವತಿಸುತ್ತಿದೆ. ಆದರೆ ಆಟೋಟಿಪ್ಪರ್, ಕಾಂಪ್ಯಾಕ್ಟರ್ ಚಾಲಕರು ಹಾಗೂ ಸ್ವಚ್ಚತಾಗಾರರನ್ನು ಇದರಿಂದ ಕೈಬಿಡಲಾಗಿದೆ. ಅಂದಿನಿಂದಲೂ ಚಾಲಕರು ಹಾಗೂ ಸ್ವಚ್ಛತಾಗಾರರು, ನಾವೂ ಪೌರಕಾರ್ಮಿಕರೇ, ನಮಗೂ ನೇರ ವೇತನ ಕೊಡಿ ಎಂದು ಆಗ್ರಹಿಸುತ್ತಾ ಬಂದಿದ್ದಾರೆ.
ಕಸದ ಲಾರಿ ಚಾಲಕರು, ಸ್ವಚ್ಛತಾಗಾರರಿಗೂ ನೇರ ವೇತನ ಪದ್ಧತಿ ಜಾರಿಯಾಗುತ್ತಾ ?
ಕಸದ ಲಾರಿ ಚಾಲಕರು, ಸ್ವಚ್ಛತಾಗಾರರು ನಮ್ಮನ್ನು ಪೌರಕಾರ್ಮಿಕರೆಂದು ಪರಿಗಣಿಸಿ, ನೇರವೇತನ ಪದ್ಧತಿಗೆ ಒಳಪಡಿಸಿ ಎಂದು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶೇಷ ಆಯುಕ್ತ ರಂದೀಪ್ ಅವರು, ಅಷ್ಟು ಸುಲಭವಾಗಿ ನೇರವೇತನಕ್ಕೆ ಒಳಪಡಿಸಲು ಸಾಧ್ಯವಿಲ್ಲ. ನಾಲ್ಕೈದು ಸಾವಿರ ಸಂಖ್ಯೆಯ ಚಾಲಕರು, ಸ್ವಚ್ಛತಾಗಾರರು ಇದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಕುರಿತು ನಿರ್ಧಾರವಾಗಬೇಕಿದೆ ಎಂದಿದ್ದಾರೆ.
ಇದೀಗ ಬಿಬಿಎಂಪಿಯಲ್ಲಿ ಆಡಳಿತಗಾರರಾದ ಗೌರವ್ ಗುಪ್ತರಲ್ಲಿಯೂ ಚಾಲಕರು, ಸ್ವಚ್ಛತಾಗಾರರ ಜಂಟಿ ಕ್ರಿಯಾ ಸಮಿತಿ ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆ ಘನತ್ಯಾಜ್ಯ ವಿಶೇಷ ಆಯುಕ್ತ ರಂದೀಪ್ಗೆ ಪತ್ರ ಬರೆದಿರುವ ಆಡಳಿತಗಾರರು, ಖಾಸಗಿ ಗುತ್ತಿಗೆದಾರರ ಅಡಿಯಲ್ಲಿ 15-20 ವರ್ಷದಿಂದ ಕೆಲಸ ಮಾಡ್ತಿದ್ದ, ಪೌರಕಾರ್ಮಿಕರನ್ನು 1-1-2018 ರಿಂದ ನೇರವೇತನಕ್ಕೆ ಒಳಪಡಿಸಲಾಗಿದೆ. ಇವರ ಜೊತೆ ಕೆಲಸ ಮಾಡುತ್ತಿರುವ ಚಾಲಕರು, ಸ್ವಚ್ಛತಾಗಾರರನ್ನು ಇದರಿಂದ ಹೊರಗಿಡಲಾಗಿದೆ. ಇವರನ್ನೂ ಪೌರಕಾರ್ಮಿಕರೆಂದು ಪರಿಗಣಿಸಿ ಎಂಬ ಮನವಿಯ ಬಗ್ಗೆ ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಡಳಿತಗಾರರು ಪತ್ರ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ, ವಿಶೇಷ ಆಯುಕ್ತ ರಂದೀಪ್, ಅಷ್ಟು ಸುಲಭವಾಗಿ ನೇರವೇತನಕ್ಕೆ ಒಳಪಡಿಸಲು ಸಾಧ್ಯವಿಲ್ಲ. ನಾಲ್ಕೈದು ಸಾವಿರ ಸಂಖ್ಯೆಯ ಚಾಲಕರು, ಸ್ವಚ್ಛತಾಗಾರರು ಇದ್ದಾರೆ. ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಬೇಕಿದೆ. ಬಯೋಮೆಟ್ರಿಕ್ ಹಾಜರಾತಿ ಈಗಾಗಲೇ ತೆಗೆದುಕೊಳ್ಳಲಾಗ್ತಿದೆ. ಆದ್ರೆ ಗುತ್ತಿಗೆದಾರರಿಂದಲೇ ವೇತನ ಪಾವತಿ ನಡೆಯುತ್ತಿದೆ. ಕೆಲವೊಂದು ಕಡೆ ಪೌರಕಾರ್ಮಿಕರನ್ನೇ ಗುತ್ತಿಗೆದಾರರು ವಾಹನ ಚಾಲಕರನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರ ಲೇಬರ್ಗಳನ್ನು ಹಾಕುತ್ತಿಲ್ಲ. ಬಯೋಮೆಟ್ರಿಕ್ ಬಳಸಿದರೆ ಸಿಕ್ಕಿಹಾಕಿಕೊಳ್ಳುತ್ತಾರೆ. ಈಗ ಜೂನಿಯರ್ ಹೆಲ್ತ್ ಇನ್ಸ್ಪೆಕ್ಟರ್ಗಳ ಬಯೋಮೆಟ್ರಿಕ್ ತೆಗೆದುಕೊಂಡ್ರೂ ಅವರಿಗೆ ಏಜೆನ್ಸಿ ಮೂಲಕವೇ ವೇತನ ಪಾವತಿ ನಡೆಯುತ್ತಿದೆ ಎಂದರು. ಒಟ್ಟಿನಲ್ಲಿ ನೇರವೇತನ ಪಾವತಿಗೆ ಆಡಳಿತಗಾರರಾದ ಗೌರವ್ ಗುಪ್ತ ಒಲವು ತೋರಿಸಿದ್ರೂ, ನೇರವೇತನ ಪಾವತಿ ತಕ್ಷಣದಲ್ಲಿ ಜಾರಿಗೆ ಬರುವ ಸಾಧ್ಯತೆ ಕಡಿಮೆ.