ಮಹದೇವಪುರ: ಬೆಂಗಳೂರಲ್ಲಿ ಕಸದ ಸಮಸ್ಯೆ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಬೆಂಗಳೂರು ಪೂರ್ವ ತಾಲೂಕಿಗೆ ಹೊಂದಿಕೊಂಡಿರುವ ಪಂಚಾಯಿತಿಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದ್ದು ಅಲ್ಲಿಯೂ ಸಹ ಕಸದ ಸಮಸ್ಯೆ ಹೆಚ್ಚಾಗುತ್ತಿದೆ.
ಕಸ ವಿಲೇವಾರಿ ಮಾಡಲು ಪಂಚಾಯಿತಿ ವ್ಯಾಪ್ತಿಯಲ್ಲೇ ಕಸದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು ಮುಂದಾಗಿದ್ದಾರೆ. ಅದಕ್ಕಾಗಿ ಶಾಸಕ ಅರವಿಂದ ಲಿಂಬಾವಳಿಯವರ ಸಹಕಾರದಿಂದ ಮಹದೇವಪುರದ 11 ಪಂಚಾಯಿತಿಗಳಲ್ಲಿಯೂ ಕಸ ವಿಲೇವಾರಿ ಘಟಕಗಳನ್ನು ಮಾಡಲು ಸರ್ಕಾರಿ ಜಾಗವನ್ನು ಗುರ್ತಿಸಿ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಕೆಲವು ಪಂಚಾಯಿತಿಗಳಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕಗಳು ನಿರ್ಮಾಣ ಮಾಡಲಾಗುತ್ತಿದೆ.
ಹೈಕೋರ್ಟ್ನಿಂದ ತಡೆಯಾಜ್ಞೆ ತಂದ ಬಿಲ್ಡರ್ಸ್:
ಮಂಡೂರು ಗ್ರಾಮ ಪಂಚಾಯಿತಿಯಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕ ಮಾಡಲು ವನಜೇನಹಳ್ಳಿಯ ಸರ್ವೇ ನಂಬರ್ 11ರಲ್ಲಿ 5.ಎಕರೆ 35 ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ. ಈ ಜಾಗದ ಪಕ್ಕ ಹೊರ ರಾಜ್ಯ ಆಂಧ್ರಪ್ರದೇಶದಿಂದ ಬಂದಿರುವ ಬಿಲ್ಡರ್ಗಳಾದ ಸುಧಾಕರ್ ಮತ್ತು ಎಂ.ವಿ.ವೆಂಕಟೇಶ್ ಎಂಬುವರು ಜಮೀನನ್ನು ಖರೀದಿ ಮಾಡಿದ್ದು ಸರ್ಕಾರಿ ಖರಾಬು ಭೂಮಿಯನ್ನು ಕಬಳಿಸಲು ಹುನ್ನಾರ ಹಾಕಿದೆ. ಕಸ ವಿಲೇವಾರಿ ಘಟಕದ ಸುತ್ತಮುತ್ತ ಯಾವುದೇ ಬಡಾವಣೆಗಳು ಇಲ್ಲದಿದ್ದರೂ ಹೈಕೋರ್ಟ್ನಲ್ಲಿ ಬಡಾವಣೆಗಳಿದ್ದು ನಿವಾಸಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಹೈಕೋರ್ಟ್ನಿಂದ ತಡೆಯಾಜ್ಞೆಯನ್ನು ತಂದಿದ್ದಾರೆ.
ಬಿಲ್ಡರ್ಗಳಾದ ಸುಧಾಕರ್ ಮತ್ತು ಎಂ.ವಿ.ವೆಂಕಟೇಶ್ ಜಮೀನು ನಂತರ ಬರುವ ಕಸ ವಿಲೇವಾರಿ ಜಾಗಕ್ಕೆ ಹೋಗಲು ದಾರಿಯನ್ನು ಬಿಡದೆ ಅಡ್ಡಾಲಾಗಿ ಕಾಂಪೌಂಡ್ ಕಟ್ಟಲು ಮುಂದಾಗಿದ್ದಾರೆ.ಕಸದ ವಿಲೇವಾರಿ ಘಟಕ ಇಲ್ಲದೇ ಇಲ್ಲಿನ ಕಸವನ್ನು ಬಿಬಿಎಂಪಿಯವರ ಮೂಲಕ ದೊಡ್ಡಬಳ್ಳಾಪುರಕ್ಕೆ ರವಾನೆ ಮಾಡಲಾಗುತ್ತದೆ.ಈ ಸಮಸ್ಯೆಯಿಂದ ತಪ್ಪಿಸಲು ಪಂಚಾಯಿತಿ ವ್ಯಾಪ್ತಿಯಲ್ಲಿ ವಿಲೇವಾರಿ ಘಟಕ ನಿರ್ಮಾಣ ಮಾಡಲು ಕಾರ್ಯ ನಿರ್ವಹಣಾಧಿಕಾರಿ ಮಂಜುನಾಥ್ ಮುಂದಾಗಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಜೊತೆ ಮಾತನಾಡಿದ ಮಂಜುನಾಥ್, ಮೊಟ್ಟ ಮೊದಲಿಗೆ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಜ್ಞಾನಿಕ ಕಸ ವಿಂಗಡನೆ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಮಹದೇವಪುರದ 11 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗುತ್ತಿದೆ. ಆದರೆ ಮೂರು ಗ್ರಾಮ ಪಂಚಾಯಿತಿ ಘಟಕಗಳ ನಿರ್ಮಾಣಕ್ಕೆ ಅಡೆತಡೆಗಳು ಬಂದಿದ್ದವು ನ್ಯಾಯಲದಲ್ಲಿ ನಮ್ಮ ಕಡೆ ನ್ಯಾಯ ಬಂದಿದೆ ಎಂದರು.