ಬೆಂಗಳೂರು:ನ್ಯೂ ಇಯರ್ ಪಾರ್ಟಿಯಲ್ಲಿ ಮಿಂದೆದ್ದ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ ಒಂದೇ ರಾತ್ರಿಗೆ ಹತ್ತು ಟನ್ ಕಸ ಬಿದ್ದಿದ್ದು, ಅದನ್ನು ಸ್ವಚ್ಛಗೊಳಿಸಲಾಗಿದೆ.
ಅಗ್ಲಿ ಇಂಡಿಯನ್ ಸಂಸ್ಥೆಯೊಂದಿಗೆ ಮಾಡಿದ್ದ ಚಾಲೆಂಜ್ ನಲ್ಲಿ ಪಾಲಿಕೆ ಗೆದ್ದಿದ್ದು, ಸೂರ್ಯೋದಯದ ಮೊದಲೇ ರಸ್ತೆಗಳನ್ನು ಸ್ವಚ್ಛಗೊಳಿಸಿದೆ. ಬೆಳಗ್ಗೆ ಮೂರು ಗಂಟೆಗೇ ಕಾರ್ಮಿಕರನ್ನು ಕರೆಸಿ ರಸ್ತೆ ಸ್ವಚ್ಛಗೊಳಿಸಲಾಗಿದೆ. ಬಳಿಕ ಅಗ್ಲಿ ಇಂಡಿಯನ್ ಸಂಸ್ಥೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಕಸ ಹುಡುಕುವ ಸ್ಪರ್ಧೆ ಕೂಡ ಏರ್ಪಡಿಸಿತ್ತು.
ಕಸ ಸ್ವಚ್ಛಗೊಳಿಸಿದ ಬಿಬಿಎಂಪಿ ಬಳಿಕ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್, ಹೊಸವರ್ಷದಲ್ಲಿ ಮೊದಲ ದಿನವೇ ಪಾಲಿಕೆ ವಿರುದ್ಧ ಸುದ್ದಿಗಳು ಬರಬಾರ್ದು ಎಂಬ ಕಾರಣಕ್ಕೆ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿದೆ. ಅಗ್ಲಿ ಇಂಡಿಯನ್ ಚಾಲೆಂಜ್ ಸ್ವೀಕರಿಸಿ ಬೆಳಗ್ಗೆ ಮೂರರಿಂದ ಆರು ಗಂಟೆಯವರೆಗೆ ಒಂದು ಕಾಂಪ್ಯಾಕ್ಟರ್ ಕಸ ಅಂದರೆ ಹತ್ತು ಟನ್ ಕಸ ವಿಲೇವಾರಿ ಮಾಡಲಾಗಿದೆ ಎಂದರು. ಅಲ್ಲದೆ, ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ಮಾಡದೆ, ಕಸ ವಿಂಗಡಿಸುವ ಬಗ್ಗೆ ಹೆಚ್ಚೆಚ್ಚು ಜವಾಬ್ದಾರಿ ವಹಿಸಬೇಕು ಎಂದರು.
ಕಸ ಸ್ವಚ್ಛಗೊಳಿಸಿದ ಬಿಬಿಎಂಪಿ ಬಳಿಕ ಕಸ ಹುಡುಕುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪುಟಾಣಿಗಳು, ಹಿರಿಯರು ಹಾಗೂ ಪೌರಕಾರ್ಮಿಕರಿಗೆ ಅಗ್ಲಿ ಇಂಡಿಯನ್ ಬಹುಮಾನಗಳನ್ನು ನೀಡಿತು. ಕಸ ಹುಡುಕುವ ಸ್ಪರ್ಧೆಯಲ್ಲಿ ಒಟ್ಟು 40 ಮಂದಿ ಪಾಲ್ಗೊಂಡಿದ್ದರು. ಇದರಲ್ಲಿ ರೋಹನ್, ನಿವೇದಿತ, ತನ್ವಿ ಸುಚಿತ್ ಅವರಿಗೆ ಬಹುಮಾನ ನೀಡಲಾಯಿತು. ಆಡಳಿತವನ್ನು ದೂರುವುದಕ್ಕಿಂತ ಕಸ ಹಾಕುವ ಜನರಲ್ಲಿ ಅರಿವು ಹೆಚ್ಚಾಗಬೇಕು. ಕಸವನ್ನು ಎಲ್ಲೆಂದರಲ್ಲಿ ಎಸೆಯುವ ಬದಲು ಡಸ್ಟ್ಬಿನ್ ಬಳಸಬಹುದು. ಕಸ ಕಮ್ಮಿ ಮಾಡುವ ಉದ್ದೇಶದಿಂದ ಅಗ್ಲಿ ಇಂಡಿಯನ್ ಈ ಕೆಲಸ ಶ್ಲಾಘನೀಯ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ ನಾಗರಾಜ್ ತಿಳಿಸಿದರು.