ಬೆಂಗಳೂರು: ಕಸದ ಸೆಸ್ ಹೆಚ್ಚು ಮಾಡುವ ಯಾವುದೇ ಪ್ರಸ್ತಾಪ ಪಾಲಿಕೆಯ ಮುಂದಿಲ್ಲ ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಸ್ಪಷ್ಟಪಡಿಸಿದ್ದು, ಮಹಾನಗರಿ ಜನರ ಮೇಲೆ ಕಸದ ಕರ ಭಾರ ತಳ್ಳಿಹಾಕಿದ್ದಾರೆ.
ವಿಧಾನಸೌಧದಲ್ಲಿ ಮಿಷನ್ 2022ರ ಯೋಜನೆ ನಿಮಿತ್ತ ಮುಖ್ಯಮಂತ್ರಿಗಳ ಜೊತೆ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸದ ಸೆಸ್ ಜಾಸ್ತಿ ಮಾಡುವ ಪ್ರಸ್ತಾಪ ಇಲ್ಲ. ಕಸಕ್ಕೆ ಸಂಬಂಧಿಸಿದಂತೆ ಹೊಸದಾಗಿ ಯಾವುದೇ ದರ ವಿಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ವೈಟ್ ಟ್ಯಾಪಿಂಗ್ ರಸ್ತೆ ವೇಗವಾಗಿ ಮುಗಿಸಲು ಆದ್ಯತೆ ನೀಡಲಾಗುತ್ತದೆ, ಹೊಸದಾಗಿ ವೈಟ್ ಟ್ಯಾಪಿಂಗ್ ಮಂಜೂರಾತಿ ಮಾಡುವ ಬಗ್ಗೆ ಪ್ರಸ್ತಾಪ ಇಲ್ಲ, ಭವಿಷ್ಯದಲ್ಲಿ ಅದರ ಪರಿಶೀಲನೆ ಮಾಡಲಾಗುತ್ತದೆ, ಸದ್ಯ ಹಾಲಿ ಇರುವ ಕೆಲಸ ಮುಗಿಸುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಬೆಂಗಳೂರಿಗರಿಗೆ ಹೊಸದಾಗಿ ಕಸದ ಕರಭಾರ ಇಲ್ಲ
ಚಿಕ್ಕಪೇಟೆ ಸಮಸ್ಯೆಗೆ ಪರಿಹಾರ, ರಸ್ತೆ, ಒಳಚರಂಡಿ ಕಾಮಗಾರಿ, ಶೌಚಾಲಯ ಎಲ್ಲವನ್ನೂ ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಬೇರೆ ಬೇರೆ ಯೋಜನೆಯಡಿ ಕೆಲಸ ಆರಂಭವಾಗಿದೆ. ಎರಡು ವರ್ಷದ ಅವಧಿಯಲ್ಲಿ ಸಿಎಂ ನಿರ್ದೇಶನದಲ್ಲಿ ಕಾರ್ಯಪಡೆ ರಚಿಸಿ ಅನುಷ್ಠಾನ ಮಾಡಲಾಗುತ್ತದೆ ಎಂದರು.
ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಮಾತನಾಡಿ, ಸಿಎಂ ನೇತೃತ್ವದ ಸಮಿತಿ ರಚಿಸಲಾಗಿದೆ, ಬೆಂಗಳೂರಿಗೆ ಸಂಬಂಧಿಸಿದ ಸಮಸ್ಯೆ ಪರಿಹಾರಕ್ಕೆ ವಿವಿಧ ಇಲಾಖೆಗಳ ನಡುವೆ ಸಮನ್ವಯತೆ ಸಾಧಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತದೆ ಎಂದರು. ಕಸದ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗುತ್ತಿದೆ, ಮುಂದಿನ ಎರಡು ವರ್ಷದಲ್ಲಿ ಒಳ್ಳೆಯ ರೀತಿಯಲ್ಲಿ ಕಸ ಸಂಸ್ಕರಣೆ ಆಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಕಸದ ಸೆಸ್ ಹೆಚ್ಚಿಸದ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ
ನಗರದ ರಾಜಕಾಲುವೆಗಳಲ್ಲಿ 2500 ಒತ್ತುವರಿ ಗುರುತಿಸಿದ್ದೇವೆ. ಈಗಾಗಲೇ 1500 ತೆರವು ಮಾಡಿದ್ದೇವೆ. ಕೋವಿಡ್ ಕಾರಣಕ್ಕೆ ತೆರವು ಸ್ಥಗಿತಗೊಂಡಿದ್ದು, ಈಗ ಮತ್ತೆ ತೆರವು ಕಾರ್ಯ ಆರಂಭಿಸಲಿದ್ದೇವೆ. ಇದರ ಜೊತೆ ಜೊತೆಯಲ್ಲೇ ರಾಜಕಾಲುವೆ ಅಭಿವೃದ್ಧಿ ಕೂಡ ಆರಂಭಿಸಲಿದ್ದೇವೆ ಎಂದರು.
ಓದಿ:ಬೆಂಗಳೂರಲ್ಲಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ: ಮಗ ಸಾವು, ತಾಯಿ ಸ್ಥಿತಿ ಗಂಭೀರ
ಹೊಸ ಪಾರ್ಕಿಂಗ್ ನೀತಿ ಕರಡು ಸಿದ್ಧಪಡಿಸಲಾಗಿದೆ. ಅದು ಶೀಘ್ರವೇ ಅಂತಿಮಗೊಂಡು ಜಾರಿಯಾಗಲಿದೆ. ಪಿಪಿಪಿ ಮಾದರಿಯಲ್ಲಿ ಜಾರಿ ಮಾಡುತ್ತೇವೆ, ಟ್ಯಾಕ್ಸಿ ಪಾರ್ಕಿಂಗ್, ಮನೆಗಳಲ್ಲಿ ಪಾರ್ಕಿಂಗ್ ಇಲ್ಲದವರು ಅನುಮತಿ ಪಡೆದರೆ ಅವಕಾಶ ಕಲ್ಪಿಸಲಾಗುತ್ತದೆ ಎಂದರು.
ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಸಿಂಗ್ ಮಾತನಾಡಿ, ಮಿಷನ್ 2022 ಯೋಜನೆಗಳಿಗೆ ಹಣಕಾಸು ತೊಂದರೆಯಾಗಲ್ಲ. ಕೆರೆಗಳ ಅಭಿವೃದ್ಧಿ ಜೊತೆಗೆ ಒತ್ತುವರಿಯಾಗಿರುವ ಕೆರೆಗಳ ಒತ್ತುವರಿ ತೆರವು ಮಾಡಿ ಅಭಿವೃದ್ಧಿ ಮಾಡಲಾಗುತ್ತದೆ. ಇಂದು ಮಿಷನ್ ಘೋಷಣೆ ಮಾಡಿದ್ದೇವೆ, ಕಾಲ ಮಿತಿಯಲ್ಲಿ ಅನುಷ್ಠಾನ ಆಗಲಿದೆ ಎಂದು ಭರವಸೆ ನೀಡಿದರು.