ಬೆಂಗಳೂರು: ಹೊಸ ವರ್ಷಾಚರಣೆಗೂ ಮುನ್ನ ಕರ್ನಾಟಕ ರಾಜ್ಯಕ್ಕೆ ಅನ್ಯ ರಾಜ್ಯಗಳಿಂದ ಸರಬರಾಜಾಗುವ ಮಾದಕವಸ್ತುಗಳ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದ ರಾಜ್ಯ ರೈಲ್ವೇ ಪೊಲೀಸರು ಐದು ಪ್ರಕರಣಗಳಿಂದ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ.
ಒಡಿಶಾ ಮೂಲದ ನಿತ್ಯಾನಾನದ್ ದಾಸ್ (37), ನಿಕೇಶ್ ರಾಣಾ (23), ಜಲಂಧರ್ ಕನ್ಹರ್ (18), ಬೈಕುಂಟಾ ಕನ್ಹರ್ (20), ಸಾಗರ್ ಕನ್ಹರ್ (19), ತ್ರಿಪುರಾ ಮೂಲದ ರಾಜೇಶ್ ದಾಸ್ (25) ಹಾಗೂ ಬಿಹಾರ ಮೂಲದ ಅಮರ್‌ಜಿತ್ ಕುಮಾರ್ (23) ಬಂಧಿತ ಆರೋಪಿಗಳು. ಬಂಧಿತರಿಂದ ಅಂದಾಜು 60 ಲಕ್ಷ ಮೌಲ್ಯದ ಒಟ್ಟು 60.965 ಕೆ.ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ರಾಜ್ಯಕ್ಕೆ ರೈಲುಗಳ ಮೂಲಕ ಸಾಗಣೆಯಾಗುವ ಮಾದಕ ಪದಾರ್ಥಗಳ ವಿರುದ್ಧ ಡಿಸೆಂಬರ್ 22 ರಿಂದ ರೈಲ್ವೇ ಪೊಲೀಸರು ವಿಶೇಷ ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಒಡಿಶಾ, ಬಿಹಾರ, ಪಶ್ಚಿಮ ಬಂಗಾಳದಿಂದ ಬರುವ ರೈಲುಗಳ ಮೇಲೆ ಹೆಚ್ಚು ನಿಗಾವಣೆ ವಹಿಸಿ ಮಾದಕವಸ್ತುಗಳನ್ನು ಪತ್ತೆ ಮಾಡಲಾಗಿದೆ. ಬೆಂಗಳೂರು ನಗರ ರೈಲ್ವೇ ಪೊಲೀಸ್ ಠಾಣೆಯಲ್ಲಿ 1, ಬೈಯಪ್ಪನಹಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ 2, ಬೆಂಗಳೂರು ಗ್ರಾಮಾಂತರ ರೈಲ್ವೇ ಪೊಲೀಸ್ ಠಾಣೆಯಲ್ಲಿ 1 ಮತ್ತು ಹುಬ್ಬಳ್ಳಿ ರೈಲ್ವೇ ಪೊಲೀಸ್ ಠಾಣೆಯಲ್ಲಿ 1 ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.