ಬೆಂಗಳೂರು: ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ವಿಚಾರ ವಿಧಾನಸಭೆಯಲ್ಲಿ ಒಂದು ಗದ್ದಲಕ್ಕೆ ಕಾರಣವಾಗಿ ಪ್ರತಿಪಕ್ಷದ ಸದಸ್ಯರು ಕೆಲಕಾಲ ಧರಣಿ ನಡೆಸಿದರು. ಮುಖ್ಯಮಂತ್ರಿಗಳು ತನಿಖೆ ನಡೆಸುವ ಹಾಗೂ ಸರ್ವಪಕ್ಷ ಸಭೆ ಕರೆಯುವ ಭರವಸೆಯ ಹಿನ್ನೆಲೆಯಲ್ಲಿ ಧರಣಿ ಹಿಂಪಡೆಯಲಾಯಿತು.
ಪರಿಶಿಷ್ಟ ಜಾತಿ - ಪಂಗಡದ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಕೊಳವೆ ಬಾವಿಗಳು ಕಳೆದ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಗುತ್ತಿಗೆ ನೀತಿಯಿಂದ ಹೀಗಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ಆರೋಪಿಸಿದರು. ಕೊಳವೆ ಬಾವಿಗಳನ್ನು ಕೊರೆಸುವುದರ ಜೊತೆಗೆ ಇವುಗಳಿಗೆ ಪಂಪ್‍ಸೆಟ್ ಹಾಗೂ ವಿದ್ಯುತ್ ಸೌಕರ್ಯಗಳನ್ನು ಒದಗಿಸಬೇಕು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಒತ್ತಾಯಿಸಿದರು.
ಇದನ್ನೂ ಓದಿ:ಗಂಗಾ ಕಲ್ಯಾಣ ಯೋಜನೆಯಲ್ಲಿ 130 ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ: ಸಿಎಂಗೆ ಸಿದ್ದರಾಮಯ್ಯ ಪತ್ರ
ಶಾಸಕರಾದ ಪ್ರಿಯಾಂಕ್ ಖರ್ಗೆ, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಕೆ.ಅನ್ನದಾನಿ, ಪ್ರಸಾದ ಅಬ್ಬಯ್ಯ, ಭೀಮಾನಾಯ್ಕ್ ಮೊದಲಾದವರು ಕೊಳವೆಬಾವಿಗಳ ಗುತ್ತಿಗೆಯಲ್ಲಿ ಅಕ್ರಮವಾಗಿದೆ. ಫಲಾನುಭವಿಗಳಿಗೆ ಇನ್ನೂ ಯೋಜನೆ ಪ್ರಯೋಜನ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು. ಆದ್ದರಿಂದ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯೋಜನೆಯ ಎಲ್ಲ ಕೊಳವೆ ಬಾವಿಗಳನ್ನು ಇದೇ ವರ್ಷ ಪೂರ್ಣಗೊಳಿಸುವ ಭರವಸೆ ನೀಡಿದರು. ಅಲ್ಲದೇ, ಗಂಗಾ ಕಲ್ಯಾಣ ಯೋಜನೆಯಲ್ಲಿ ಆಗಿರುವ ಅಕ್ರಮಗಳನ್ನು ತನಿಖೆ ನಡೆಸಲಾಗುವುದು ಹಾಗೂ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸರ್ವಪಕ್ಷದ ಸಭೆ ಕರೆದು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.