ಬೆಂಗಳೂರು:ಕಳೆದ ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ರವಿ ಪ್ರಕಾಶ್ ಪೂಜಾರಿ ಬಂಧನದ ಬಗ್ಗೆ ಅಧಿಕೃತವಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಮಾಧ್ಯಮಗೋಷ್ಟಿ ನಡೆಸಿದರು.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 97 ಪ್ರಕರಣಗಳಲ್ಲಿ ಬೇಕಾಗಿದ್ದ ರವಿ ಪೂಜಾರಿ 1994 ರಲ್ಲಿ ಮುಂಬೈನಲ್ಲಿನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಅನಂತರ ಜಾಮೀನು ಪಡೆದು ಕೆಲವೇ ದಿನಗಳಲ್ಲಿ ಬೇರೆ ಬೇರೆ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರ ಬಂಧನ ಭೀತಿಯಿಂದ ಮುಂಬೈ ತೊರೆದಿದ್ದ. ನೇಪಾಳ, ಬ್ಯಾಂಕಾಕ್, ಉಗಾಂಡ ಮೂಲಕ ಸೆನೆಗಲ್ನಲ್ಲಿ ತಲೆಮರೆಸಿಕೊಂಡಿದ್ದ. ಕಳೆದ 26 ವರ್ಷಗಳಿಂದಲೂ ವಿದೇಶದಲ್ಲಿದ್ದರೂ ದೇಶದ ಉದ್ಯಮಿ, ರಾಜಕಾರಣಿ ಹಾಗೂ ಸಿನಿಮಾದವರಿಗೆ ಹಣಕ್ಕಾಗಿ ಜೀವ ಬೆದರಿಕೆವೊಡ್ಡಿದ್ದ.
ಈತನ ಪತ್ತೆಗಾಗಿ ರಾಜ್ಯ ಸರ್ಕಾರ ನನ್ನನ್ನು ನೇಮಿಸಿತ್ತು. ಇದರಂತೆ 2018 ರಿಂದ ನಿರಂತರ ಪ್ರಯತ್ನದ ಸಲುವಾಗಿ 2019ರಲ್ಲಿ ಜ.19ರಂದು ಆತನನ್ನು ಸೆನೆಗಲ್ ಪೊಲೀಸರು ಬಂಧಿಸಿ ಒಂದು ವರ್ಷ ನ್ಯಾಯಾಂಗ ಬಂಧನದಲ್ಲಿರಿಸಿದ್ದರು. ಕಾನೂನು ಪ್ರಕ್ರಿಯೆ ಮುಗಿಸಿಕೊಂಡು ಇದೇ ತಿಂಗಳ ಫೆ.22ರಂದು ಭಾರತೀಯ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಅಮರ್ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.