ಬೆಂಗಳೂರು: ಶಿವಾಜಿನಗರದಲ್ಲಿ ರಾಷ್ಟ್ರಭಕ್ತ ಮಹಾಪುರುಷರ ಪುತ್ಥಳಿಗೆ ಮಸಿ ಬಳಿದು ಅವಮಾನಗೊಳಿಸುವ ಮೂಲಕ ಹಿಂಸಾಚಾರಕ್ಕೆ ಆಸ್ಪದ ಕೊಟ್ಟು, ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹಾಗೂ ರಾಜ್ಯದ ಕೆಲವು ಭಾಗಗಳಲ್ಲಿ ವಿನಾಃಕಾರಣ ಆತಂಕವನ್ನು ಸೃಷ್ಟಿಸಿರುವ ವಿಚ್ಛಿದ್ರಕಾರಿ ದುಷ್ಟಶಕ್ತಿಗಳನ್ನು ಮತ್ತು ಈ ಘಟನೆಗಳ ಹಿಂದಿರುವ ಷಡ್ಯಂತ್ರವನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಅವರ ಪುತ್ಥಳಿಗೆ ಮಸಿ ಬಳಿದು ಬಂಧಿತರಾಗಿರುವ ಏಳು ವ್ಯಕ್ತಿಗಳನ್ನು ವಿಚಾರಿಸಿ ಈ ರೀತಿಯ ಹಿಂಸಾತ್ಮಕ ಮತ್ತು ಪ್ರಚೋದನಕಾರಿ ಚಟುವಟಿಕೆಗಳ ಹಿಂದೆ ಇರುವ ಷಡ್ಯಂತ್ರವನ್ನು ಪತ್ತೆ ಹಚ್ಚುವುದು ಅತ್ಯಂತ ಜರೂರು ಮತ್ತು ಅನಿವಾರ್ಯವಾಗಿದೆ. ಸಮಾಜದ ಕಾನೂನು ಮತ್ತು ಸುವ್ಯವಸ್ಥೆಯನ್ನು ಹದಗೆಡಿಸುವ ಈ ಷಡ್ಯಂತ್ರ ಒಂದು ಖಂಡನಾರ್ಹ ಬೆಳವಣಿಗೆ ಎಂದು ಪತ್ರಿಕಾ ಹೇಳಿಕೆ ಮೂಲಕ ಅಭಿಪ್ರಾಯಪಟ್ಟಿದ್ದಾರೆ.