ಬೆಂಗಳೂರು:ಪ್ರಧಾನಿ ಮೋದಿ ಕುರಿತು ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಅವರ ಮಾತುಗಳು ಅವರ ಮತ್ತು ಕಾಂಗ್ರೆಸ್ ಪಕ್ಷದ ಹತಾಶೆಯ ಪ್ರತೀಕವಾಗಿವೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ. ಗಣೇಶ್ ಕಾರ್ಣಿಕ್ ಟೀಕಿಸಿದ್ದಾರೆ.
ಉಪಚುನಾವಣೆ, ಗ್ರಾಮ ಪಂಚಾಯತಿ ಚುನಾವಣೆಗಳು ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಸೋಲುತ್ತಿರುವುದನ್ನು ಗಮನಿಸಿದ ದಿನೇಶ್ ಗುಂಡೂರಾವ್, ತಮ್ಮ ಹತಾಶೆಯ ಸಂಕೇತವಾಗಿ 'ಪ್ರಧಾನಿಗಳು ಹಿಟ್ಲರ್ರಂತೆ ವರ್ತಿಸುತ್ತಿದ್ದಾರೆ' ಎಂಬ ಹೇಳಿಕೆ ನೀಡಿ ಪ್ರಧಾನಿಗಳ ಕುರಿತು ತಮಗಿರುವ ಅಲ್ಪಜ್ಞಾನ ಪ್ರದರ್ಶಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೇಶವನ್ನು ಸಮರ್ಥವಾಗಿ ಮುನ್ನಡೆಸುವ ದೃಷ್ಟಿಯಿಂದ ಅತ್ಯುತ್ತಮ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ತಂಡದ ಸಲಹೆ ಪಡೆದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಕೊರೊನಾ ಲಸಿಕೆ ಉತ್ಪಾದನೆ ಮೂಲಕ ಭಾರತವನ್ನು ಆರೋಗ್ಯ ಕ್ಷೇತ್ರದಲ್ಲಿ ವಿಶ್ವಕ್ಕೇ ಮಾದರಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ದೃಢ ಹೆಜ್ಜೆಯನ್ನಿಟ್ಟಿದೆ ಎಂದರು.
ಇದಲ್ಲದೆ, ಕೃಷಿ ಸುಧಾರಣಾ ಮಸೂದೆಗಳ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಕಡೆ ಹಾಗೂ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳನ್ನು ದೂರವಿಡಲು ಕೇಂದ್ರ ಸರ್ಕಾರವು ಮುಂದಾಗಿದೆ. ದಲ್ಲಾಳಿಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಪಕ್ಷದ ದಿನೇಶ್ ಗುಂಡೂರಾವ್ ಅವರು ಇದರಿಂದ ನಿರಾಶರಾಗಿರುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಅದನ್ನು ಪ್ರತಿಬಿಂಬಿಸುವ ಮಾದರಿಯಲ್ಲಿ ಈ ಹೇಳಿಕೆ ಹೊರಬಿದ್ದಿದೆ ಎಂದು ಕ್ಯಾ. ಕಾರ್ಣಿಕ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಾರ್ಯಾಧ್ಯಕ್ಷರೊಂದಿಗೆ ಕೆಪಿಸಿಸಿ ಅಧ್ಯಕ್ಷರ ಸಭೆ : ಮಹತ್ವದ ವಿಚಾರಗಳ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ತಮ್ಮ ಅತ್ಯುತ್ತಮ ಮತ್ತು ಸಮರ್ಥ ಕಾರ್ಯವೈಖರಿಯ ಮೂಲಕ ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ಅವರು ಕೊರೊನಾ ಸಂಕಷ್ಟವನ್ನು ನಿಭಾಯಿಸಿದ್ದನ್ನು ಮತ್ತು ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಿದ್ದನ್ನು ವಿಶ್ವವೇ ಮೆಚ್ಚಿಕೊಂಡಿದೆ. ಅಲ್ಲದೆ, ಹತ್ತಾರು ಪ್ರಶಸ್ತಿಗಳು ಅವರನ್ನು ಹುಡುಕಿ ಬಂದಿರುವುದು ದೇಶವನ್ನು ಪ್ರಧಾನಿಗಳು ಭಾರತವನ್ನು ವಿಶ್ವವಂದ್ಯ ರಾಷ್ಟ್ರವನ್ನಾಗಿ ಮುನ್ನಡೆಸುತ್ತಿರುವುದಕ್ಕೆ ಸಾಕ್ಷಿ ಎಂದು ಬಿಜೆಪಿ ರಾಜ್ಯ ವಕ್ತಾರ ಹೇಳಿದ್ದಾರೆ.