ಬೆಂಗಳೂರು :ಗಣೇಶ ಹಬ್ಬ ಅಂದರೆ ದೊಡ್ಡ ದೊಡ್ಡ ಮೂರ್ತಿಗಳು, ಡಿಜೆಸೌಂಡ್, ಸಾಂಸ್ಕೃತಿಕ ಕಾರ್ಯಕ್ರಮ, ಅದ್ದೂರಿ ಮೆರವಣಿಗೆ ಕಣ್ಮುಂದೆ ಬರುತ್ತವೆ. ಆದರೆ, ಕಳೆದೆರಡು ವರ್ಷಗಳಿಂದ ಕೊರೊನಾ ಇದಕ್ಕೆಲ್ಲಾ ಬ್ರೇಕ್ ಹಾಕಿ ಸರಳವಾಗಿ ಹಬ್ಬ ಆಚರಣೆ ಮಾಡುವಂತೆ ಮಾಡಿದೆ.
ಕಳೆದೆರಡು ವರ್ಷದಿಂದ ಎಲ್ಲಾ ಕೊರೊನಾ ಇಡೀ ದೇಶದಾದ್ಯಂತ ಪರಿಣಾಮ ಬೀರಿದ್ದು, ಎಲ್ಲೆಡೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಯಾವ ಹಬ್ಬವನ್ನೂ ಅದ್ದೂರಿಯಾಗಿ ಆಚರಿಸಲು ಆಗಿಲ್ಲ. ಈ ಸಾರಿಯೂ ಸರ್ಕಾರದ ಕೆಲ ಷರತ್ತುಗಳನ್ನು ವಿಧಿಸಿ ಹಬ್ಬ ಆಚರಣೆಗೆ ಅನುವು ಮಾಡಿಕೊಟ್ಟಿತ್ತು. ಆದರೆ, ಕೊರೊನಾ ಭಯದಿಂದ ಜನತೆ ತಮ್ಮ ಮನೆಗಳಲ್ಲೇ ಸರಳವಾಗಿ ಹಬ್ಬ ಆಚರಿಸಿದ್ದಾರೆ.
ಸರ್ಕಾರದ ನಿಯಮ, ಕೊರೊನಾ ಭಯ :ಒಂದು ಕಡೆ ಕೋವಿಡ್ ಭಯ, ಮತ್ತೊಂಡೆದೆ ಸರ್ಕಾರ ಕಠಿಣ ರೂಲ್ಸ್ ತಯಾರಕರ ವ್ಯಾಪಾರದ ಮೇಲೆ ಕರಿಛಾಯೆ ಮೂಡಿಸಿದೆ. ಸಾಲಸೋಲ ಮಾಡಿ ತಯಾರಕರು ದೊಡ್ಡ ದೊಡ್ಡ ಗಣೇಶ ಮೂರ್ತಿಗಳನ್ನು ಸಿದ್ಧ ಮಾಡಿ ವ್ಯಾಪಾರವಿಲ್ಲದೆ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಬಾರಿ ಹೆಚ್ಚಾಗಿ ವಿಗ್ರಹಗಳ ಮಾರಾಟ ಆಗದೆ ಮಾವಳ್ಳಿ, ಹೆಬ್ಬಾಳ, ಪಾಟರಿಟೌನ್ ಮತ್ತು ನಗರದ ಹಲವೆಡೆ ಮೂರ್ತಿಗಳು ಗೋಡಾನ್ನಲ್ಲಿಯೇ ಉಳಿದಿವೆ.
ಅಲ್ಪಪ್ರಮಾಣದ ಮೂರ್ತಿಗಳ ಮಾರಾಟ :ಗಣೇಶ ಹಬ್ಬಕ್ಕೆಂದೆ ತಯಾರಕರೊಬ್ಬರು ಸುಮಾರು 2000ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ತಯಾರಿಸಿದ್ದರು. ಆದರೆ, ಈ ಬಾರಿ ಕೇವಲ 500 ಮೂರ್ತಿಗಳು ಮಾತ್ರ ಮಾರಾಟವಾಗಿವೆ. ಹಲವು ತಯಾರಕರದ್ದು ಇದೇ ಗೋಳು.