ಬೆಂಗಳೂರು :ಗಾಂಧಿಯವರು ದೇಶದ ಸಾಮಾನ್ಯ ರೈತರಿಗೂ ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರೋಧಿ ಧೋರಣೆ ಅರ್ಥ ಮಾಡಿಸಿ, ಹೋರಾಟವನ್ನು ನಡೆಸಿದರು. ಆದರೆ, ಇಂದು ಅಂತಹ ಮುಖಂಡರ ಕೊರತೆ ಕಾಣುತ್ತಿದೆ ಎಂದು ಹೈ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಬೇಸರ ವ್ಯಕ್ತಪಡಿಸಿದರು.
ಸೋಮವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಎ.ಅಣ್ಣಾಮಲೈ ಅವರ 'ಗಾಂಧಿ ದಿ ಲಾಯರ್' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ಗಾಂಧಿಯವರ ಬಗ್ಗೆ ಪುಸ್ತಕ, ಸಿನಿಮಾ ಬಂದಿದೆ. ಆದರೆ, ಗಾಂಧೀಜಿಯವರ ಬಗ್ಗೆ ಇನ್ನೂ ಅನೇಕ ಸೂಕ್ಷ್ಮಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಆಗಬೇಕಿದೆ. ಈ ಕೃತಿ ಅಂತಹ ಕೆಲಸವನ್ನು ಮಾಡುತ್ತಿದೆ ಎಂದರು.
ಗಾಂಧಿಯವರ ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ಅನುಭವ ಇಂದಿಗೂ ಪ್ರಭಾವ ಬೀರುತ್ತದೆ. ಹೀಗಾಗಿ ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತವಾಗಿದೆ ಎಂದ ಅವರು, ಬ್ಯಾಂಕ್ ಮೊತ್ತ, ಆಸ್ತಿ, ಚಿನ್ನಾಭರಣ ಸೇರಿ ಇತರ ಕಾರಣಕ್ಕಾಗಿ ಮೊಕದ್ದಮೆ ಹೂಡಿ ಕೋರ್ಟ್ನಲ್ಲಿ ಹೋರಾಡಿದ್ದನ್ನು ನೋಡಿದ್ದೇನೆ. ಆದರೆ, ತಂದೆ ತಾಯಿ ಬಿಟ್ಟು ಹೋದ ಪುಸ್ತಕಗಳನ್ನು ತಮ್ಮದಾಗಿಸಿಕೊಳ್ಳಲು ಮೊಕದ್ದಮೆ ಹೂಡಲು ಮುಂದಾಗುವ ಕಾಲ ಬರಲಿ ಎಂದು ಆಶಿಸಿದರು.
ಮಹಾತ್ಮ ಗಾಂಧೀಜಿ ಅವರನ್ನು ಬ್ರಿಟೀಷ್ ಸಾಮ್ರಾಜ್ಯದ ವಿರುದ್ಧದ ದೇಶ ಜಾಗೃತಿಯ ಲೇಖನಗಳಿಗೆ ಸೇಡಿಶನ್ ಕಾಯ್ದೆಯಡಿ ಸಾವಿರಾರು ದಿನಗಳ ಕಾಲ ಬಂಧಕ್ಕೊಳಪಡಿಸಲಾಗಿತ್ತು. ಆದರೆ, ಸ್ವಾತಂತ್ರ್ಯದ ನಂತರ ಈ ಕಾಯ್ದೆಯನ್ನು ತೆಗೆದು ಹಾಕಬೇಕಿತ್ತು. ಆದರೆ ನಮ್ಮ ಸರ್ಕಾರಗಳು ಮುಂದುವರೆಸಿಕೊಂಡು ಬಂದಿರುವುದು ದುರ್ದೈವದ ಸಂಗತಿ ಎಂದು ಅಭಿಪ್ರಾಯಪಟ್ಟರು.