ಕರ್ನಾಟಕ

karnataka

ETV Bharat / state

ಬಿಎಂಟಿಸಿ ಘಟಕ‌ 4ರಲ್ಲಿ 'ಗಾಂಧಿ ಪಾಯಿಂಟ್' ಕ್ಯಾಂಟೀನ್​ಗೆ ಚಾಲನೆ - ​ ETV Bharat Karnataka

ಬಿಎಂಟಿಸಿ ಘಟಕ‌ 4ರಲ್ಲಿ ಗಾಂಧಿ ಪಾಯಿಂಟ್ ಕ್ಯಾಂಟೀನ್​ ಪ್ರಾರಂಭಿಸಲಾಗಿದ್ದು ಸಂಸ್ಥೆಯ ನೌಕರರಿಗೆ ಅನುಕೂಲವಾಗಲಿದೆ.

ಗಾಂಧಿ ಪಾಯಿಂಟ್ ಕ್ಯಾಂಟೀನ್
ಗಾಂಧಿ ಪಾಯಿಂಟ್ ಕ್ಯಾಂಟೀನ್

By ETV Bharat Karnataka Team

Published : Oct 2, 2023, 7:59 PM IST

Updated : Oct 2, 2023, 8:15 PM IST

ಬೆಂಗಳೂರು : ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಗಾಂಧಿ ಜಯಂತಿ ದಿನ ತನ್ನ ನೌಕರರಿಗೆ ಭರ್ಜರಿ ಗಿಫ್ಟ್ ನೀಡಿದೆ. ರಿಯಾಯಿತಿ ದರದಲ್ಲಿ ಶುಚಿ, ರುಚಿಯಾದ ಊಟ-ಉಪಹಾರ ಒದಗಿಸುವ ಗಾಂಧಿ ಪಾಯಿಂಟ್ ಕ್ಯಾಂಟಿನ್‌ ಆರಂಭಿಸಲಾಗಿದೆ.

ಬಿಎಂಟಿಸಿ ಘಟಕ‌ 4ರಲ್ಲಿ ಇಂದು ಮಹಾತ್ಮ ಗಾಂಧಿ ಜಯಂತಿಯನ್ನು ಸರಳ‌, ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಸಿಬ್ಬಂದಿಗೆ ರಿಯಾಯಿತಿ ದರದಲ್ಲಿ ಉತ್ತಮ‌ ಗುಣಮಟ್ಟದ ತಿಂಡಿ ಮತ್ತು ಊಟ ಒದಗಿಸಲು ಗಾಂಧಿ ಪಾಯಿಂಟ್ ಹೆಸರಿನ ಕ್ಯಾಂಟಿನ್ ಆರಂಭಿಸಲಾಗಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕ್ಯಾಂಟೀನ್‌ಗೆ ಚಾಲನೆ ನೀಡಿದರು.

ಸ್ವತಂತ್ರ ಆಹಾರದ ಸೇವೆ ಹೆಸರಿನ ಟ್ಯಾಗ್‌ಲೈನ್ ಹೊಂದಿದ ಗಾಂಧಿ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಸಾರಿಗೆ ಸಚಿವರು, "ಈಗಾಗಲೇ ಬಿಎಂಟಿಸಿ‌ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವ ಕಾರ್ಯ ಪ್ರಗತಿಯಲ್ಲಿದೆ. ನಗರದ ಕೇಂದ್ರ ಭಾಗದಲ್ಲಿರುವ ಬಸ್ ನಿಲ್ದಾಣದಲ್ಲಿ ಕ್ಯಾಂಟೀನ್ ತೆರೆಯುವುದರಿಂದ ನಾಲ್ಕೂ ಸಾರಿಗೆ ಸಂಸ್ಥೆಗಳ‌ ಚಾಲನಾ ಸಿಬ್ಬಂದಿಗೆ ಬಹಳ ಅನುಕೂಲವಾಗಲಿದೆ. ಉತ್ತಮ ಗುಣಮಟ್ಟದ ಆಹಾರ ರಿಯಾಯಿತಿ ದರದಲ್ಲಿ ದೊರಕಲಿದೆ. ಇದೇ ರೀತಿ ಇತರೆ ಘಟಕಗಳಲ್ಲಿಯೂ ಕ್ಯಾಂಟೀನ್ ಪ್ರಾರಂಭಿಸಲು ಸೂಚನೆ ನೀಡಲಾಗಿದೆ" ಎಂದರು.

ಸಾರಿಗೆ ನಿಗಮದ ಸಿಬ್ಬಂದಿಗೆ ಕೋಟಿ ರೂ.ಗಳ ಅಪಘಾತ ವಿಮೆ ಮಾಡಿಸುವ ಮೂಲಕ ನೌಕರರ ಹಿತರಕ್ಷಣೆಗೆ ಮುಂದಾಗಿ ಸಿಬ್ಬಂದಿಯ ಪ್ರಶಂಸೆಗೆ ಪಾತ್ರವಾಗಿದ್ದ ಬಿಎಂಟಿಸಿ, ಇದೀಗ ಅಲ್ಪದರಕ್ಕೆ ಊಟ ಉಪಹಾರ ಒದಗಿಸುವ ಮೂಲಕ ಮತ್ತಷ್ಟ ಮನ್ನಣೆ ಗಳಿಸಿ ನೌಕರಸ್ನೇಹಿ ವಾತಾವರಣ ಸೃಷ್ಟಿಸುತ್ತಿದೆ.

ಸಮಾರಂಭದಲ್ಲಿ ಬಿಎಂಟಿಸಿ ದಕ್ಷಿಣ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕೀರ್ತಿಚಂದ್ರ, ಜಯನಗರ ಘಟಕ 4ರ ಘಟಕ ವ್ಯವಸ್ಥಾಪಕ ರವೀಂದ್ರ ಹಾಗೂ ಘಟಕದ ಸಿಬ್ಬಂದಿ ಹಾಜರಿದ್ದರು.

ಬಿಎಂ‌‌‌‌ಟಿ‌‌ಸಿ ರಜತ ಮಹೋತ್ಸವ: ಸೆ.26 ರಂದು ಬೆಂಗಳೂರಿನ ಸೆಂಟ್ರಲ್ ‌ಕಾಲೇಜಿನ ಜ್ಞಾನಜ್ಯೋತಿ‌ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಎಂ‌‌‌‌ಟಿ‌‌ಸಿ ರಜತ ಮಹೋತ್ಸವ ಸಮಾರಂಭದಲ್ಲಿ ರಾಮಲಿಂಗಾರೆಡ್ಡಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಅವರು, ಬಿಎಂಟಿಸಿಗೆ 25 ವರ್ಷಗಳಾಗಿವೆ. ಮೊದಲಿಗೆ ಕೇವಲ 98 ಬಸ್ಸಿನಿಂದ ಕಾರ್ಯಾಚರಣೆ ಆರಂಭವಾಗಿತ್ತು. ಆ ವೇಳೆ ಬೆಂಗಳೂರು ಚಿಕ್ಕದಾಗಿತ್ತು. ಸಾರಿಗೆ ಅಗತ್ಯವೂ ಕೂಡ ಕಡಿಮೆಯಿತ್ತು. ಆದರೆ ಈಗ ನಗರ ದೊಡ್ಡದಾಗಿದೆ. ಸಾರಿಗೆ ಸಂಸ್ಥೆ ಕೂಡ ಹೆಮ್ಮರವಾಗಿ ಬೆಳೆದು ನಿಂತಿದೆ.

ಸದ್ಯ ದೇಶಕ್ಕೆ ಮಾದರಿಯಾಗಿರುವ ಬಿಎಂಟಿಸಿ ಸಂಸ್ಥೆಗೆ ಇನ್ನಷ್ಟು ಉತ್ತಮ ಸಕಾರ ಅಗತ್ಯವಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಪ್ರತಿಯೊಬ್ಬ ನೌಕರರ ಸಹಕಾರ ಅಗತ್ಯ. ಕೆಎಸ್​ಆರ್​ಟಿಸಿಯ ನೌಕರರಿಗೆ 1 ಕೋಟಿ ರೂ ವಿಮೆ ನೀಡಲಾಗುತ್ತಿದೆ. ಇದನ್ನು ಬಿಎಂಟಿಸಿಗೆ ಕೂಡ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮೆಜೆಸ್ಟಿಕ್‌ನಲ್ಲಿ ಕ್ಯಾಂಟಿನ್‌ ವ್ಯವಸ್ಥೆಯಿರಲಿಲ್ಲ, ದೊಡ್ಡದಾದ ಬಿಎಂಟಿಸಿ ಕ್ಯಾಂಟಿನ್ ತೆರೆಯಲಾಗುತ್ತಿದೆ ಎಂದು ತಿಳಿಸಿದ್ದರು.

ಇದನ್ನೂ ಓದಿ: ಬಿಎಂಟಿಸಿಗೆ 25 ವರ್ಷ! '98 ಬಸ್​ಗಳಿಂದ ಆರಂಭವಾದ ಸಂಸ್ಥೆ ಈಗ ಹೆಮ್ಮರ': ಸಚಿವ ರಾಮಲಿಂಗಾರೆಡ್ಡಿ

Last Updated : Oct 2, 2023, 8:15 PM IST

ABOUT THE AUTHOR

...view details