ಬೆಂಗಳೂರು:ಯಾವುದೇ ಕಾರಣಕ್ಕೂ ಮಹಾತ್ಮ ಗಾಂಧೀಜಿಯವರ ಅವಹೇಳನಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ಯಾರಾದರೂ ಅವಹೇಳನದಂತಹ ಪ್ರಯತ್ನಕ್ಕೆ ಮುಂದಾದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಹಲವು ಇಲಾಖೆಗಳ ಸಹಯೋಗದಲ್ಲಿ ಗಾಂಧಿ ಭವನದಲ್ಲಿ ನಡೆದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಾಂಧೀಜಿ ಜನ್ಮ ದಿನ ಆಚರಣೆ ನಮ್ಮೆಲ್ಲರಿಗೂ ಗೌರವದ ಸಂಗತಿ. ಗಾಂಧೀಜಿ ಈ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸದಿದ್ದರೆ ನಾವು ಗುಲಾಮಗಿರಿಯಿಂದ ಹೊರಗೆ ಬರಲು ಬಹಳ ಕಷ್ಟವಾಗುತ್ತಿತ್ತು. ಗಾಂಧಿ ವಕೀಲರಾಗಿ ದಕ್ಷಿಣ ಆಫ್ರಿಕಾಗೆ ಹೋದವರು. ಅಲ್ಲಿಯೂ ಕೂಡ ಹೋರಾಟ ಮಾಡಲು ಆರಂಭಿಸಿ ಜೈಲುವಾಸ ಅನುಭವಿಸಿದರು. ನಂತರ ಭಾರತಕ್ಕೆ ಗೋಪಾಲಕೃಷ್ಣ ಗೋಖಲೆ ಆಹ್ವಾನದ ಮೇರೆಗೆ ಭಾರತಕ್ಕೆ ಬಂದರು.
ಗೋಖಲೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಬ್ರಿಟೀಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡುಗಡೆ ಮಾಡಬೇಕಿದೆ. ನಾವು ಹೋರಾಟ ಆರಂಭಿಸಿದ್ದೇವೆ. ಬಂದು ನೇತೃತ್ವ ವಹಿಸಿ ಎಂದು ಮನವಿ ಮಾಡಿದ್ದರು. ಅದನ್ನು ಒಪ್ಪಿ ಗಾಂಧಿ ಬಂದರು. ಸಮಾಜದ ಎಲ್ಲ ವರ್ಗದ ಜನರನ್ನು ಭೇಟಿ ಮಾಡಿದರು. ಸಮಾಜ, ಜನ ಗೊತ್ತಿರಬೇಕು, ಜನರ ಬದುಕು ಗೊತ್ತಿರಬೇಕು ಎಂದು ದೇಶ ಪ್ರವಾಸ ಮಾಡಿದರು ಎಂದರು.
ಸರಳ ಜೀವನದ ಪ್ರತೀಕ: ಅವರು ಸರಳ ಜೀವನ ಅಳವಡಿಸಿಕೊಂಡಿದ್ದರು. ಅವರಷ್ಟು ಸರಳ ಜೀವನ ಮಾಡಿದವರು ಬೇರೊಬ್ಬರಿಲ್ಲ. ಒಮ್ಮೆ ರೈಲಿನಲ್ಲಿ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದರು. ಸಹ ಪ್ರಯಾಣಿಕರು ಏಕೆ ಮೂರನೇ ದರ್ಜೆ ಸೀಟಿನಲ್ಲಿ ಪ್ರಯಾಣಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗಾಂಧಿ ಅವರು, ನಾಲ್ಕನೇ ದರ್ಜೆ ರೈಲಿನಲ್ಲಿ ಇಲ್ಲ. ಇದ್ದಿದ್ದರೆ ಅಲ್ಲೇ ಪ್ರಯಾಣಿಸುತ್ತಿದ್ದೆ. ಅದು ಇಲ್ಲದ್ದರಿಂದ ಮೂರನೇ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದರು. ಇಷ್ಟು ಸರಳವಾದ ವ್ಯಕ್ತಿತ್ವ ಗಾಂಧಿಯವರದ್ದಾಗಿತ್ತು ಎಂದು ಉದಾಹರಿಸಿದರು.
ಗಾಂಧೀಜಿ ಮಾತಿನಂತೆ ನಡೆದುಕೊಳ್ಳುತ್ತಿದ್ದರು. ಬಸವಾದಿ ಶರಣರಂತೆ ನುಡಿದಂತೆ ನಡೆದರು. ಅವರು ಸ್ವಾತಂತ್ರ್ಯ ಪಡೆಯಲು ಬಳಸಿದ ಮಾರ್ಗ ಅಹಿಂಸಾ ಮಾರ್ಗವಾಗಿತ್ತು. ಅಹಿಂಸಾ ಮಾರ್ಗದ ಮೂಲಕ ದೇಶದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತಿದ್ದರು. ಪ್ರಚಾರದ ತಂತ್ರಜ್ಞಾನ ಇಲ್ಲದೇ ಇದ್ದರೂ ದೇಶದ ಮೂಲೆ ಮೂಲೆಗೆ ತಲುಪುವಷ್ಟ ಜನಪ್ರೀಯರಾಗಿದ್ದರು. ಗಾಂಧಿ ಭಾಷಣಕ್ಕೆ ಎಲ್ಲ ಕಡೆಯಿಂದ ಜನರು ಹರಿದುಬರುತ್ತಿದ್ದರು. ಗಾಂಧೀಜಿ ಎಲ್ಲಿ ಇರುತ್ತಾರೋ ಅದೇ ದೇವಾಲಯ. ಅವರು ಎಲ್ಲಿ ತಿರುಗಾಡುತ್ತಾರೋ ಅದೇ ಪುಣ್ಯಭೂಮಿ ಎಂದು ನೆಹರೂ ಹೇಳಿದ್ದರು ಎಂದು ಸಿಎಂ ಸ್ಮರಿಸಿದರು.
ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು. ಆದರೆ, ಗಾಂಧಿ ಅದರ ಸಂಭ್ರಮ ಅನುಭವಿಸಲಿಲ್ಲ. ನಾವು ಸಂಭ್ರಮಿಸುತ್ತಿದ್ದಾಗ ಗಾಂಧಿ ಬಂಗಾಳದಲ್ಲಿ ಶಾಂತಿಗಾಗಿ ಸತ್ಯಾಗ್ರಹ ಮಾಡುತ್ತಿದ್ದರು. ಠಾಗೋರ್ ಅವರು ಗಾಂಧಿಗೆ ಮಹಾತ್ಮ ಎಂದು ಕರೆದರು. 1944 ರಲ್ಲಿ ಗಾಂಧಿಗೆ ಮಹಾತ್ಮ ಎಂಬ ಬಿರುದು ಬಂತು. ದೇಶಕ್ಕೆ ಇನ್ನೊಬ್ಬ ಮಹಾತ್ಮ ಇಲ್ಲ, ಗಾಂಧಿ ಒಬ್ಬರೇ ಈ ದೇಶದ ಪಿತಾಮಹಾ ಎಂದು ಸುಭಾಷ್ ಚಂದ್ರ ಬೋಸ್ ಗಾಂಧೀಜಿಯನ್ನು ಪಿತಾಮಹಾ ಎಂದು ಕರೆದಿದ್ದರು ಅಂತಾ ಹೇಳಿದರು.