ಬೆಂಗಳೂರು :ಮಹಾತ್ಮ ಗಾಂಧಿ ಅವರ ತತ್ವ ಸಿದ್ಧಾಂತ, ಚಿಂತನೆಗಳು ನಮಗೆ ಮಾರ್ಗದರ್ಶಕವಾಗಿರಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ 'ಜಗನ್ನಾಥ ಭವನ'ದಲ್ಲಿ ಇಂದು (ಸೋಮವಾರ) ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಮಲ್ಲೇಶ್ವರ ಮಂಡಲ ಅಧ್ಯಕ್ಷೆ ಕಾವೇರಿ ಕೇದಾರನಾಥ್, ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕಾರ್ಯಾಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಗಾಂಧಿ ಮತ್ತು ಶಾಸ್ತ್ರಿ ಭಾವಚಿತ್ರಕ್ಕೆ ಗೌರವ ಸಮರ್ಪಣೆ ನಡೆಯಿತು.
"ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಸತ್ಯ ಮತ್ತು ಅಹಿಂಸೆಯ ಉನ್ನತ ಧ್ಯೇಯದೊಂದಿಗೆ ಗಾಂಧೀಜಿ ಅವರ ಚಿಂತನೆಗಳು ಇಂದು ಇಡೀ ಜಗತ್ತಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿವೆ. ಗಾಂಧೀಜಿ ಕಂಡ ಕನಸು ನನಸಾಗಿಸಲು ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಹಗಲಿರುಳು ಶ್ರಮಿಸುತ್ತಿದ್ದಾರೆ" ಎಂದು ಎನ್.ರವಿಕುಮಾರ್ ನುಡಿದರು.
"ಆಡಳಿತವನ್ನು ಗ್ರಾಮದತ್ತ ಕೊಂಡೊಯ್ದು, ಅಲ್ಲಿ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಕಾರ್ಯಗಳನ್ನು ಗ್ರಾಮೀಣ ಮಟ್ಟದಲ್ಲಿಯೇ ಕೈಗೊಂಡು ಗ್ರಾಮ ಸ್ವರಾಜ್ಯದಿಂದ ರಾಮರಾಜ್ಯ ಮಾಡಲು ಶ್ರಮಿಸುತ್ತಿದ್ದಾರೆ. ಆದರೆ, ಕಾಂಗ್ರೆಸ್‍ನವರು ಗಾಂಧೀಜಿ ಅವರ ಯಾವುದೇ ತತ್ವ, ಸಿದ್ಧಾಂತ, ಚಿಂತನೆಗಳನ್ನು ಪಾಲಿಸದೇ ಕೇವಲ ಅವರ ಗಾಂಧಿ ಹೆಸರನ್ನು ಉಲ್ಲೇಖಿಸುತ್ತಾ ರಾಜಕೀಯ ಮಾಡುತ್ತಿದ್ದಾರೆ" ಎಂದು ಟೀಕಿಸಿದರು