ಬೆಂಗಳೂರು: ಗಲಭೆ ಪ್ರಕರಣ ತನಿಖೆ ನಡುವೆಯೂ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಗಣೇಶ ಹಬ್ಬದ ಸಲುವಾಗಿ ಕೂರಿಸಿದ್ದ ಗಣೇಶ ಮೂರ್ತಿಯನ್ನು ಪೊಲೀಸರು ನಿಮಜ್ಜನ ಮಾಡಿದ್ದಾರೆ.
ಡಿ.ಜೆ.ಹಳ್ಳಿ ಠಾಣೆಯಲ್ಲಿ ಪ್ರತಿಷ್ಟಾಪಿಸಿದ್ದ ಗಣಪ ಮೂರ್ತಿ ನಿಮಜ್ಜನ - ಬೆಂಗಳೂರು
ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರತಿಸ್ಥಾಪಿಸಲಾಗಿದ್ದ ಗಣೇಶನ ಮೂರ್ತಿಯನ್ನು ಪೊಲೀಸರ ಸಮ್ಮುಖದಲ್ಲಿ ನಿಮಜ್ಜನ ಮಾಡಲಾಯಿತು.
ವಾರದ ಹಿಂದೆ ಠಾಣೆಯಲ್ಲಿ ಶಾಂತಿ ನೆಲೆಸಲಿ ಎಂಬ ಆಶಯದೊಂದಿಗೆ ಸಂತೋಷ್ ಗುರೂಜಿ ಠಾಣೆಯ ಪ್ರವೇಶ ದ್ವಾರದಲ್ಲಿ ಬಾಲ ಗಣೇಶ ಮೂರ್ತಿಯನ್ನು ಕೂರಿಸಿದ್ದರು. ಅಂದಿನಿಂದ ಏಳು ದಿನಗಳ ಕಾಲ ವಿಘ್ನ ನಿವಾರಕನಿಗೆ ಶ್ರದ್ಧಾ ಭಕ್ತಿಯಿಂದ ಸಿಬ್ಬಂದಿ ಪೂಜೆ ಮಾಡುತ್ತಿದ್ದರು. ಠಾಣೆಗೆ ಬರುವ ಪ್ರತಿಯೊಬ್ಬರೂ ಕೈ ಮುಗಿದು ಹೋಗುತ್ತಿದ್ದರು. ಗಣೇಶ ಕೂರಿಸಿ ಇಂದಿಗೆ ಏಳು ದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಠಾಣೆಯ ಆವರಣದಲ್ಲಿರುವ ಸಿಂಥೆಟಿಕ್ಸ್ ಟ್ಯಾಂಕ್ನಲ್ಲಿ ಮೂರ್ತಿ ನಿಮ್ಮಜ್ಜನ ಮಾಡಲಾಯಿತು.
ಆಗಸ್ಟ್ 11ರಂದು ನಡೆದ ಬೆಂಗಳೂರು ಗಲಭೆಯಲ್ಲಿ ಅನೇಕ ಸಾರ್ವಜನಿಕ ಆಸ್ತಿಪಾಸ್ತಿ, ಪೊಲೀಸ್ ವಾಹನಗಳು ನಾಶವಾಗಿದ್ದವು. ಈ ಹಿನ್ನೆಲೆಯಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಪರಿಸ್ಥಿತಿ ಶಾಂತವಾಗಲಿ ಎಂಬ ಉದ್ದೇಶದಿಂದ ಪೊಲೀಸರು ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದರು.