ಕರ್ನಾಟಕ

karnataka

ETV Bharat / state

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ : ಸಮನ್ಸ್ ರದ್ದು ಕೋರಿ ಹೈಕೋರ್ಟ್​ಗೆ ಪ್ರಣವ್ ಮೊಹಂತಿ ಅರ್ಜಿ - High Court

ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ನೀಡಿರುವ ಈ ಸಮನ್ಸ್ ರದ್ದು ಕೋರಿ ಅಧಿಕಾರಿ ಪ್ರಣವ್ ಮೊಹಂತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

Ganapathi case: Pranav Mohanty petition to the HC seeking cancellation of summons
ಹೈಕೋರ್ಟ್

By

Published : Sep 10, 2020, 9:22 PM IST

ಬೆಂಗಳೂರು :ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ನ ‘ಬಿ’ ರಿಪೋರ್ಟ್ ತಿರಸ್ಕರಿಸಿ ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿರುವ ಸಮನ್ಸ್ ರದ್ದು ಕೋರಿ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಆಗಸ್ಟ್ 28ರಂದು ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿದೆ. ಅಲ್ಲದೆ, ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 306 ರ ಅಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದು, ಆರೋಪಿತರಾದ ಕೆ.ಜೆ.ಜಾರ್ಜ್, ಪ್ರಣವ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್‌ ಅವರು ಸೆ.28ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ವಿಚಾರಣಾ ನ್ಯಾಯಾಲಯ ನೀಡಿರುವ ಈ ಸಮನ್ಸ್ ರದ್ದು ಕೋರಿ ಅಧಿಕಾರಿ ಪ್ರಣವ್ ಮೊಹಂತಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಬಿ ವರದಿ ಸಲ್ಲಿಸಿದ್ದಾರೆ. ತನಿಖಾಧಿಕಾರಿಗಳ ವರದಿ ತಿರಸ್ಕರಿಸಿರುವ ವಿಚಾರಣಾ ನ್ಯಾಯಾಲಯ ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೀಡಿರುವ ಸಮನ್ಸ್ ಕ್ರಮಬದ್ಧವಾಗಿಲ್ಲ. ಹೀಗಾಗಿ ಸಮನ್ಸ್ ರದ್ದುಗೊಳಿಸಬೇಕು ಎಂದು ಕ್ರಿಮಿನಲ್ ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ :

ಮಂಗಳೂರಿನ ಐಜಿಪಿ ಕಚೇರಿಯಲ್ಲಿ ಡಿವೈಎಸ್‌ಪಿ ಆಗಿ ಕೆಲಸ ಮಾಡುತ್ತಿದ್ದ ಎಂ.ಕೆ. ಗಣಪತಿ ಅವರು 2016ರ ಜುಲೈ 7ರಂದು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಸ್ಥಳೀಯ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿ, ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್, ಹಿರಿಯ ಐಪಿಎಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣವ್ ಮೊಹಂತಿ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದರು. ಮೊದಲು ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಆರೋಪಿತರಿಗೆ ಕ್ಲೀನ್ ಚಿಟ್ ನೀಡಿತ್ತು. ಗಣಪತಿ ಕುಟುಂಬದ ಕಾನೂನು ಹೋರಾಟ ನಡೆಸಿದ್ದರಿಂದ 2017ರಲ್ಲಿ ಸುಪ್ರೀಂಕೋರ್ಟ್ ಪ್ರಕರಣವನ್ನು ಚೆನ್ನೈ ಸಿಬಿಐ ಅಧಿಕಾರಿಗಳಿಗೆ ವಹಿಸಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ ಅಧಿಕಾರಿಗಳು ಆರೋಪಿತರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯ ಲಭ್ಯವಿಲ್ಲ ಎಂದು ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್ ಸಲ್ಲಿಸಿದ್ದರು.

ABOUT THE AUTHOR

...view details