ಕರ್ನಾಟಕ

karnataka

ETV Bharat / state

ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಸಹೋದರಿ ಗಗನ ಸುಕನ್ಯಾ ಆಮ್‌ ಆದ್ಮಿ ಪಾರ್ಟಿ ಸೇರ್ಪಡೆ - ಎಎಪಿ ಸ್ಪರ್ಧಾಕಾಂಕ್ಷಿ ದಿಲ್‌ ನವಾಜ್‌

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಪಕ್ಷ ಬದಲಾವಣೆ ಸಾಮಾನ್ಯ ಬೆಳವಣಿಗೆ. ಇದೀಗ ಕಾಂಗ್ರೆಸ್ ಮುಖಂಡ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಹೋದರಿ ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ.

Aam Aadmi Party
ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಗಗನ ಸುಕನ್ಯಾ

By

Published : Feb 5, 2023, 10:36 AM IST

ಆಮ್‌ ಆದ್ಮಿ ಪಕ್ಷ ಸೇರ್ಪಡೆಯಾದ ಗಗನ ಸುಕನ್ಯಾ

ಬೆಂಗಳೂರು:ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತಿವೆ. ಅದರಲ್ಲೂ ಕ್ಷೇತ್ರ ಬದಲಾವಣೆ ಮಾಮೂಲಿಯಾಗಿದೆ. ಇದೀಗ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿಯವರ ಸಹೋದರಿ ಹಾಗೂ ಕೋಲಾರ ಜಿಲ್ಲಾ ಪಂಚಾಯತ್‌ನ ಕೆಡಿಪಿ ಸದಸ್ಯೆ ಗಗನ ಸುಕನ್ಯಾ ಅವರು ಆಮ್‌ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ.

ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪೃಥ್ವಿ ರೆಡ್ಡಿ, "ಕೋಲಾರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರೂ ಗಗನ ಸುಕನ್ಯಾರವರು ಜನರ ಕಷ್ಟಗಳಿಗೆ ನಿರಂತರವಾಗಿ ನೆರವಾಗುತ್ತಾ ಬಂದಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ರೇಷನ್‌ ಕಿಟ್‌ ವಿತರಿಸಿ ಬಡವರಿಗೆ ಸಹಾಯಹಸ್ತ ಚಾಚಿದ್ದಾರೆ. ಕೆಜಿಎಫ್‌ ವಿಧಾನಸಭಾ ಕ್ಷೇತ್ರದ ನೂರಾರು ಶಾಲೆಗಳಿಗೆ ಕ್ರೀಡಾ ಸಾಮಗ್ರಿ, ಬ್ಯಾಗ್‌, ನೋಟ್‌ ಪುಸ್ತಕಗಳನ್ನು ಒದಗಿಸಿದ್ದಾರೆ. ಆಂಧ್ರ ಪ್ರದೇಶ ಹಾಗೂ ತಮಿಳುನಾಡು ಗಡಿಭಾಗದ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ" ಎಂದು ಪರಿಚಯಿಸಿದರು.

"ಗಗನ ಸುಕನ್ಯಾ ಕೋಲಾರ ಜಿಲ್ಲಾ ಸಹಕಾರಿ ಒಕ್ಕೂಟದ ಚುನಾಯಿತ ನಿರ್ದೇಶಕರಾಗಿ, ಜಿಲ್ಲೆಯ ನೂರಾರು ಮಹಿಳೆಯರನ್ನು ಸಹಕಾರಿ ಕ್ಷೇತ್ರಕ್ಕೆ ಕರೆತಂದಿದ್ದಾರೆ. ಬಿಜೆಪಿ ಜೊತೆಗೆ ಗುರುತಿಸಿಕೊಂಡಿದ್ದ ಇವರು ಬಿಜೆಪಿಯ ರಾಜ್ಯ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿಯಾಗಿ ಐದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಕಳೆದ ಒಂಬತ್ತು ವರ್ಷಗಳಿಂದ ಕೆಇಆರ್‌ಸಿ, ಬೆಸ್ಕಾಂ, ಸಿಜಿಆರ್‌ಎಫ್‌ ಸಂಸ್ಥೆಗಳ ಗ್ರಾಹಕರ ಕುಂದುಕೊರತೆಗಳ ಪರಿಹಾರ ವೇದಿಕೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಅನುಭವಿ ನಾಯಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿರುವುದು ಸಂತಸ ತಂದಿದೆ" ಎಂದರು.

ಇದನ್ನೂ ಓದಿ:ಆಮ್‌ ಆದ್ಮಿ ಪಾರ್ಟಿಗೆ ಚಿತ್ರನಟಿ ಪೂಜಾ ರಮೇಶ್‌ ಸೇರ್ಪಡೆ

ಗಗನ ಸುಕನ್ಯಾ ಮಾತನಾಡಿ, "ಕೋಲಾರ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ರಾಜಕಾರಣಿಗಳು ಗೆಲುವು ಸಾಧಿಸಿ ಅವರು ಮಾತ್ರ ಅಭಿವೃದ್ಧಿಯಾಗಿದ್ದಾರೆಯೇ ವಿನಃ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಿಲ್ಲ. ಜಿಲ್ಲೆಯ ಜನಸಾಮಾನ್ಯರಿಗೆ ಗುಣಮಟ್ಟದ ಮೂಲ ಸೌಕರ್ಯಗಳು ದೊರೆಯಬೇಕು ಹಾಗೂ ಇಲ್ಲಿನ ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು ಅಭಿವೃದ್ಧಿಯಾಗಬೇಕು. ಇವೆಲ್ಲ ಸಾಧ್ಯವಾಗಬೇಕೆಂದರೆ ಈ ಭಾಗದಲ್ಲಿ ಆಮ್‌ ಆದ್ಮಿ ಪಾರ್ಟಿ ಜನಪ್ರತಿನಿಧಿಗಳು ಹೆಚ್ಚಿನ ಸಂಖ್ಯೆ ಗೆಲುವು ಸಾಧಿಸಿ, ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಈ ಸಂಕಲ್ಪದೊಂದಿಗೆ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ" ಎಂದು ಹೇಳಿದರು.

ಪಕ್ಷದ ಬೆಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕುಶಲಸ್ವಾಮಿ, ಕೋಲಾರದ ಮಾಜಿ ಸಂಸದ ಹಾಗೂ ಎಎಪಿ ಮುಖಂಡ ಡಾ.ವೆಂಕಟೇಶ್, ಕೋಲಾರದ ಎಎಪಿ ಜಿಲ್ಲಾಧ್ಯಕ್ಷ ಸುರೇಶ್‌ ಹಾಗೂ ಕೋಲಾರ ವಿಧಾನಸಭಾ ಕ್ಷೇತ್ರದ ಎಎಪಿ ಸ್ಪರ್ಧಾಕಾಂಕ್ಷಿ ದಿಲ್‌ ನವಾಜ್‌ ಭಾಗವಹಿಸಿದ್ದರು.

ಇದನ್ನೂ ಓದಿ:'ಶಾಸಕ ಹ್ಯಾರಿಸ್‌ ಬೆಂಬಲಿಗರಿಂದ ಗೂಂಡಾಗಿರಿ': ಆಪ್ ರಾಜ್ಯ ಕಾರ್ಯದರ್ಶಿ ಕೆ.ಮಥಾಯಿ ದೂರು

ABOUT THE AUTHOR

...view details