ಬೆಂಗಳೂರು: "ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ಜಿ20 ಎನರ್ಜಿ ಟ್ರಾನ್ಸಿಶನ್ ವರ್ಕಿಂಗ್ ಗ್ರೂಪ್ (ಇಟಿಡಬ್ಲ್ಯುಜಿ) ಸಭೆ ಆಯೋಜಿಸಲು ಬೆಂಗಳೂರು ಸಜ್ಜಾಗಿದೆ. ಈ ಸಭೆಯು ಫೆಬ್ರವರಿ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ನಡಯಲಿದೆ" ಎಂದು ಕೇಂದ್ರದ ಶಕ್ತಿ ಇಲಾಖೆಯ ಕಾರ್ಯದರ್ಶಿ ಅಲೋಕ್ ಕುಮಾರ್ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಧ ರಾಷ್ಟ್ರಗಳ ಪ್ರತಿನಿಧಿಗಳು ಭಾಗಿ: "ಜಿ20 ಸದಸ್ಯ ರಾಷ್ಟ್ರಗಳೂ ಸೇರಿದಂತೆ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೆದರ್‌ಲ್ಯಾಂಡ್ಸ್, ನೈಜೀರಿಯಾ, ಓಮನ್, ಸಿಂಗಾಪುರ, ಯುಎಇ ಮತ್ತು ಸ್ಪೇನ್ ಸೇರಿ ಒಂಬತ್ತು ವಿಶೇಷ ಆಹ್ವಾನಿತ ಅತಿಥಿ ರಾಷ್ಟ್ರಗಳ 150ಕ್ಕೂ ಹೆಚ್ಚು ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ದಿ ವರ್ಲ್ಡ್ ಬ್ಯಾಂಕ್, ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್, ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ), ಇಂಟರ್ನ್ಯಾಷನಲ್ ಎನರ್ಜಿ ಏಜೆನ್ಸಿ (ಐಇಎ), ಕ್ಲೀನ್ ಎನರ್ಜಿ ಮಿನಿಸ್ಟ್ರಿ (ಸಿಇಎಂ), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (ಯುಎನ್‌ಇಪಿ), ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಮುಂತಾದ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು (ಐಎಸ್‌ಎ), ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆ (ಯುಎನ್‌ಐಡಿಒ), ಏಷ್ಯಾ ಮತ್ತು ಪೆಸಿಫಿಕ್‌ಗಾಗಿ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ (ಯುಎನ್‌ಇಎಸ್‌ಸಿಎಪಿ), ಆರ್‌ಡಿ 20 ಸಭೆಯ ಭಾಗವಾಗಲಿದ್ದಾರೆ. ಸಂಬಂಧಪಟ್ಟ ಸಚಿವಾಲಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು ಇಟಿಡಬ್ಲ್ಯುಜಿ ಸಭೆಯಲ್ಲಿ ಉಪಸ್ಥಿತರಿರುವರು" ಎಂದು ಅವರು ತಿಳಿಸಿದರು.
ಇನ್ಫೋಸಿಸ್-ಸೋಲಾರ್ ಪಾರ್ಕ್‌ಗೆ ಭೇಟಿ: "ಮೊದಲ ಇಟಿಡಬ್ಲ್ಯೂಜಿ ಸಭೆಯ ಭಾಗವಾಗಿ ಪಾಲ್ಗೊಳ್ಳುವ ಪ್ರತಿನಿಧಿಗಳು ಇನ್ಫೋಸಿಸ್ ಗ್ರೀನ್ ಬಿಲ್ಡಿಂಗ್ ಕ್ಯಾಂಪಸ್ ಮತ್ತು ಪಾವಗಡ ಸೋಲಾರ್ ಪಾರ್ಕ್‌ಗೆ ಭೇಟಿ ನೀಡಲಿದ್ದಾರೆ. ನವೀಕರಿಸಬಹುದಾದ ಕ್ಷೇತ್ರದತ್ತ ಭಾರತದ ಪ್ರೇರಣೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮವನ್ನು ತಗ್ಗಿಸುವ ಪ್ರಯತ್ನಗಳನ್ನು ನೇರವಾಗಿ ಅವರು ವೀಕ್ಷಿಸುವರು. ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನೂ ಸಹ ಅನುಭವಿಸಲಿದ್ದಾರೆ" ಎಂದು ಮಾಹಿತಿ ನೀಡಿದರು.
ವಿವಿಧೆಡೆ ಕಾರ್ಯಕ್ರಮಗಳು: "ಭಾರತ ಸರ್ಕಾರದ ವಿದ್ಯುತ್ ಸಚಿವಾಲಯ ಇಟಿಡಬ್ಲ್ಯುಜಿಗಾಗಿ ನೋಡಲ್ ಸಚಿವಾಲಯವಾಗಿದೆ. ಕೇಂದ್ರೀಕೃತ ಆದ್ಯತೆಯ ಕ್ಷೇತ್ರಗಳಲ್ಲಿ ಚರ್ಚೆಗಳು ಮತ್ತು ಮಾತುಕತೆಗಳನ್ನು ಮುನ್ನಡೆಸಲಿದೆ. ಭಾರತದ ಅಧ್ಯಕ್ಷತೆಯಲ್ಲಿ ನಾಲ್ಕು ಇಟಿಡಬ್ಲ್ಯುಜಿ ಸಭೆಗಳು, ವಿವಿಧ ಕಡೆ ಕಾರ್ಯಕ್ರಮಗಳು ಮತ್ತು ಸಚಿವರ ಸಭೆಯನ್ನು ಯೋಜಿಸಲಾಗಿದೆ" ಎಂದರು. ಪಿಐಬಿ ಬೆಂಗಳೂರು ಎಡಿಜಿ ಎಸ್.ಜಿ.ರವೀಂದ್ರ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.