ಬೆಂಗಳೂರು: ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳಿಗೆ ನೀಡಲಾಗಿರುವ ತಡೆಯಾಜ್ಞೆ ತೆರವು ಮಾಡುವಂತೆ ಜೆಡಿಎಸ್ ಶಾಸಕರು ಆಗ್ರಹಿಸಿದ್ದಾರೆ. ವಿಧಾನಸಭೆಯಲ್ಲಿಂದು ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಈಗಾಗಲೇ ಮಂಜೂರಾಗಿದ್ದ ಕೆಲಸಗಳು ಸ್ಥಗಿತಗೊಳ್ಳುತ್ತಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡಬೇಕು. ಶಾಸಕರ ಪ್ರವೇಶಾಭಿವೃದ್ಧಿ ನಿಧಿಯಡಿ ನೀಡಲಾಗುತ್ತಿರುವ 2 ಕೋಟಿ ರೂ.ಗಳನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಯಲ್ಲಿ ಅನುದಾನವಿಲ್ಲ. ಯಾಕೆ ಚುನಾವಣೆ ಮಾಡುತ್ತೀರಿ, ರದ್ದು ಮಾಡಿ ಎಂದು ಗರಂ ಆದರು. ಇದಕ್ಕೆ ದನಿಗೂಡಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿಸಿಕೊಳ್ಳುವುದೇ ಕಷ್ಟ. ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡುವುದೇ ಕಷ್ಟ. ಆಗೋ - ಇಗೋ ಮಂಜೂರಾಗಿರುವ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ತಕ್ಷಣ ಮಂಜೂರು ಮಾಡಿರುವ ಕಾಮಗಾರಿಗಳನ್ನು ಮುಂದುವರೆಸಲು ಟೆಂಡರ್ ಕರೆದು ಆರಂಭಿಸಬೇಕೆಂದು ಒತ್ತಾಯಿಸಿದರು.
ಅನ್ನಭಾಗ್ಯ, ಶಕ್ತಿ ಯೋಜನೆಗಳು ಬಡಜನರಿಗೆ ಸಾಕಷ್ಟು ನೆರವಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾಡಿರುವ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಕ್ತಿ ಯೋಜನೆಗಳಿಂದ ರಾಜ್ಯದ ಪುರಾಣ ಪುಣ್ಯಕ್ಷೇತ್ರಗಳು, ದೇವಸ್ಥಾನಗಳು ತುಂಬಿ ತುಳುಕುತ್ತಿವೆ. ಅನ್ನಭಾಗ್ಯ ಯೋಜನೆ ಅತ್ಯಂತ ಮಹತ್ವದ್ದು. ಸಿದ್ದರಾಮಯ್ಯ ಅವರು ತಮ್ಮ ಅನುಭವದಿಂದ ಯೋಜನೆ ಜಾರಿಗೊಳಿಸಿದ್ದಾರೆ. ತಮಗೂ ಕೂಡ ಬಾಲ್ಯದಲ್ಲಿ ಅನ್ನದ ಮಹತ್ವ ಅರಿತುಕೊಳ್ಳುವಂತಹ ಅನುಭವಗಳಾಗಿವೆ ಎಂದರು.
ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡದೆ ಇರುವುದು ಖಂಡನೀಯ. ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ತಕ್ಷಣದಿಂದಲೇ ಜಾರಿಗೊಳಿಸಿಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಹೊಂದಿಲ್ಲ. ಸರ್ಕಾರ ಹಣಕಾಸು ಸಂಪನ್ಮೂಲಗಳನ್ನು ಹೊಂದಿಸಿಕೊಂಡು ಜಾರಿ ಮಾಡಲಿ ಎಂದು ಸಲಹೆ ನೀಡಿದರು. ಹಿಂದೆ ಕಾಂಗ್ರೆಸ್ ಪಕ್ಷದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ಮಾಡಿತ್ತು. ಈಗ ಆ ಪಕ್ಷವೇ ಅಧಿಕಾರಕ್ಕೆ ಬಂದಿರುವುದರಿಂದ ದರವನ್ನು ಕಡಿಮೆ ಮಾಡುವುದು ಅವರ ಕರ್ತವ್ಯ ಎಂದು ಹೇಳಿದರು.