ಬೆಂಗಳೂರು: ಬಳ್ಳಾರಿ ವಿಭಜನೆ ಆದೇಶ ವಾಪಸ್ ಪಡೆಯುವಂತೆ ಶೀಘ್ರವೇ ಸಿಎಂರನ್ನು ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ಶಾಸಕ ಸೋಮಶೇಖರ್ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಈಗಾಗಲೇ ಬಳ್ಳಾರಿ ವಿಭಜನೆ ವಿರೋಧಿಸಿ ಕೆಲವರು ಕೋರ್ಟ್ಗೆ ಹೋಗಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಹೋರಾಟದ ರೂಪುರೇಷೆ ಮಾಡುತ್ತೇವೆ. ನಾವು ಕೂಡ ಶೀಘ್ರವೇ ಸಿಎಂ ಭೇಟಿ ಮನವಿ ಮಾಡುತ್ತೇವೆ. ಬಳ್ಳಾರಿ ವಿಭಜನೆಯಿಂದ ಆಗಿರೋ ಸಮಸ್ಯೆ ಗಳ ಬಗ್ಗೆ ಮನವರಿಕೆ ಮಾಡಿಕೊಡ್ತೇವೆ. ಸಿಎಂ ಬಿಎಸ್ವೈ ಇದಕ್ಕೆ ಸ್ಪಂದಿಸಿ ಬಳ್ಳಾರಿ ವಿಭಜನೆ ಆದೇಶ ವಾಪಸ್ ಪಡೆಯುವ ವಿಶ್ವಾಸ ಇದೆ ಎಂದು ಭರವಸೆ ವ್ಯಕ್ತಪಡಿಸಿದರು.
ಆನಂದ್ ಸಿಂಗ್ಗೆ ಬಳ್ಳಾರಿ ಉಸ್ತುವಾರಿಯಾಗಲು ಬಿಡಲ್ಲ:ಯಾವುದೇ ಕಾರಣಕ್ಕೂ ಆನಂದ್ ಸಿಂಗ್ ಬಳ್ಳಾರಿ ಉಸ್ತುವಾರಿ ಆಗೋದಕ್ಕೆ ನಾವು ಬಿಡಲ್ಲ ಎಂದು ಸೋಮಶೇಖರ್ ರೆಡ್ಡಿ ತಿಳಿಸಿದರು.
ಸಚಿವ ಆನಂದ್ ಸಿಂಗ್ ಬಳ್ಳಾರಿ ಉಸ್ತುವಾರಿ ಬಿಟ್ಟು, ವಿಜಯನಗರ ಉಸ್ತುವಾರಿಯಾಗಲಿ. ಅವರು ಜಿಲ್ಲೆ ವಿಭಜಿಸಿ, ಬಳ್ಳಾರಿಯಲ್ಲಿ ಇರಲು ಸೂಕ್ತ ಅಲ್ಲ. ಹೀಗಾಗಿ ವಿಜಯನಗರಕ್ಕೆ ಅವರು ಉಸ್ತುವಾರಿ ಆಗಲಿ. ಈ ಬಗ್ಗೆಯೂ ಸಿಎಂ ಬಿಎಸ್ವೈಗೆ ಮನವಿ ಮಾಡುತ್ತೇವೆ ಎಂದರು.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾವಣೆ ಮಾಡಬೇಕು. ಈಗಾಗಲೇ ಎಲ್ಲ ಶಾಸಕರು ಸಿಎಂಗೆ ಪತ್ರ ಬರೆಯುತ್ತಿದ್ದೇವೆ. ಆನಂದ್ ಸಿಂಗ್ ಬೇರೆ ಜಿಲ್ಲೆಯ ಉಸ್ತುವಾರಿ ಆಗಲಿ. ಆದರೆ, ನಮ್ಮ ಬಳ್ಳಾರಿಗೆ ಉಸ್ತುವಾರಿ ಬೇರೆಯೇ ಆಗಬೇಕು ಅಂತ ಸಿಎಂಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ರದ್ದು ಮಾಡುವುದು ಸರಿಯಲ್ಲ:ರೇಷನ್ ಕಾರ್ಡ್ ರದ್ದು ಸಂಬಂಧ ಸಚಿವ ಉಮೇಶ್ ಕತ್ತಿ ನಿರ್ಧಾರಕ್ಕೆ ಸ್ವಪಕ್ಷೀಯ ಶಾಸಕರಿಂದಲೇ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ್ ರೆಡ್ಡಿ, ಆ ರೀತಿ ನಿಯಮ ಮಾಡಿದರೆ ಅದು ತಪ್ಪಾಗುತ್ತದೆ. ಸಾಮಾನ್ಯವಾಗಿ ಫ್ರಿಡ್ಜ್, ಟಿವಿ ಇದ್ದೇ ಇರತ್ತದೆ. ಈಗಿನ ಕಾಲದಲ್ಲಿ ಯಾರು ಬೈಕ್ ಇಲ್ಲದೇ ನಡೆದುಕೊಂಡು ಹೋಗ್ತಾರೆ?. ಲೋನ್ ಮಾಡಿಯಾದ್ರೂ ಬೈಕ್ ತೆಗೆದುಕೊಂಡಿರ್ತಾರೆ. ಹಾಗಾಗಿ ಬೈಕ್ ಟಿವಿ ಇದ್ದವರಿಗೆ ಕಾರ್ಡ್ ಕ್ಯಾನ್ಸಲ್ ಮಾಡೋದು ತಪ್ಪಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.