ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾಧ್ಯಮ ಪ್ರತಿಕ್ರಿಯೆ ಬೆಂಗಳೂರು:ನಾವು ಕ್ಯಾಬಿನೆಟ್ನಲ್ಲಿ ಏನು ತೀರ್ಮಾನ ಆಗಿದೆ, ಅದನ್ನು ಕೋರ್ಟ್ಗೆ ತಿಳಿಸುತ್ತೇವೆ. ಮುಂದೆ ಸಿಬಿಐ, ಕೋರ್ಟ್ ಏನು ಮಾಡುತ್ತೆ, ಅದು ವ್ಯವಸ್ಥೆಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಡಿಸಿಎಂ ಡಿಕೆಶಿ ಅವರ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಯಡಿಯೂರಪ್ಪ ಅವರು ಸಿಬಿಐಗೆ ಕೇಸ್ ಕೊಡಿ ಅಂತ ಮೌಖಿಕ ಆದೇಶ ಕೊಟ್ಟಿದ್ದರು, ಅದು ಆಗ ರಾಜಕೀಯ ಪ್ರೇರಿತ ಆಗಿರಲಿಲ್ವಾ?. ನಾವು ಈ ನಿರ್ಧಾರ ಮಾಡಿರುವುದು ಕಾನೂನಿನ ಚೌಕಟ್ಟಿನಲ್ಲಿ, ನಮ್ಮ ಇತಿ-ಮಿತಿಯಲ್ಲಿ ತೀರ್ಮಾನವನ್ನು ಮಾಡಿದ್ದೇವೆ. ಹಾಗಾಗಿ ಅವರು ಮಾಡಿದ್ದೇ ಒಂದು ನಾವು ಮಾಡಿದ್ದೇ ಒಂದು ಆಗುವುದಿಲ್ಲ. ನಾವು ಹೈಕೋರ್ಟ್‌ಗೆ ಸಂಪುಟ ಸಭೆ ತೀರ್ಮಾನವನ್ನು ಸಲ್ಲಿಸುತ್ತೇವೆ. ಮೊದಲೇ ಒಬ್ಬ ಎಂಎಲ್ಎ ಅವರಿಗೆ ನಾವು ಯಾವುದೇ ಒಂದು ಪ್ರಕರಣದಲ್ಲಿ ಕೇಸು ಮಾಡಬೇಕಾದರೆ, ಸ್ಪೀಕರ್ ಅನುಮತಿ ತೆಗೆದುಕೊಳ್ಳಬೇಕು ಎಂಬುದು ವ್ಯವಸ್ಥೆಯಲ್ಲಿರುವ ನಿಯಮ. ಅದು ನಾನು ಮಾಡಿರುವುದಲ್ಲ ಎಂದರು.
ಇದನ್ನೂ ಓದಿ:ಡಿಕೆಶಿ ಪ್ರಕರಣ: ಹಿಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ- ಸಿಎಂ ಸಿದ್ದರಾಮಯ್ಯ
ಡಿಕೆಶಿ ಅಕ್ರಮ ಆಸ್ತಿ ಪ್ರಕರಣವೇನು?: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ- 1988ರ ವಿವಿಧ ಕಲಂಗಳ ಅಡಿ 2020ರ ಅ.3ರಂದು ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಸಿಬಿಐ ದಾಖಲಿಸಿರುವ ಎಫ್‌ಐಆರ್ ಕಾನೂನು ಬಾಹಿರವಾಗಿದ್ದು, ತನಿಖೆ ರದ್ದುಪಡಿಸಬೇಕು ಎಂದು ಕೋರಿ ಶಿವಕುಮಾರ್, 2022ರ ಜುಲೈನಲ್ಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, 2023ರ ಫೆಬ್ರವರಿ 10 ರಂದು ತನಿಖೆಗೆ ಮಧ್ಯಂತರ ತಡೆ ನೀಡಿತ್ತು.
ಈ ತಡೆ, ಆದೇಶವನ್ನು ಈ ತನಕ ವಿಸ್ತರಿಸಿಕೊಂಡು ಬರಲಾಗಿತ್ತು. ವಿಚಾರಣೆಯನ್ನು 2023ರ ಜುಲೈ 31ರಂದು ಪೂರ್ಣಗೊಳಿಸಿದ್ದ ನ್ಯಾಯಪೀಠ ತೀರ್ಪು ಕಾಯ್ದಿರಿಸಿತ್ತು. ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಿದ್ದ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಡಿಕೆಶಿ ಸಲ್ಲಿಸಿದ್ದ ಮತ್ತೊಂದು ಅರ್ಜಿಯನ್ನು ನಾಲ್ಕು ತಿಂಗಳ ಹಿಂದಷ್ಟೇ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿತ್ತು. ಇದೀಗ ಡಿ.ಕೆ. ಶಿವಕುಮಾರ್ ವಿರುದ್ಧದ ಇದೇ ಅಕ್ರಮ ಆಸ್ತಿ ಗಳಿಗೆ ಪ್ರಕರಣ ನ.29ರಂದು ಹೈ ಕೋರ್ಟ್ ಮುಂದೆ ವಿಚಾರಣೆಗೆ ಬರಲಿದೆ. ಈ ಸಂಬಂಧ ಗುರುವಾರದಂದು ರಾಜ್ಯ ಸಚಿವ ಸಂಪುಟ ಸಭೆ ಡಿಕೆಶಿ ಪ್ರಕರಣ ಸಿಬಿಐಗೆ ನೀಡಿದ್ದ ಆದೇಶ ಹಿಂತೆಗೆದುಕೊಂಡಿದ್ದು, ಹೈಕೋರ್ಟ್ನಲ್ಲಿ ನಡೆಯಲಿರುವ ವಿಚಾರಣೆ ವೇಳೆ ಈ ಮಾಹಿತಿ ಸಲ್ಲಿಸುವ ಸಾಧ್ಯತೆ ಇದೆ.