ಬೆಂಗಳೂರು: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಹಣ ಸಂಗ್ರಹಿಸಲಾಗಿದೆ ಎಂಬುದು ಆರೋಪ ಸತ್ಯಕ್ಕೆ ದೂರವಾದುದ್ದು, ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಈ ರೀತಿಯ ಬೆಳವಣಿಗೆಗಳಾಗಿರಲಿಲ್ಲವೇ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರಶ್ನಿಸಿದ್ದಾರೆ.
ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಹಾಗೂ ಇತರ ಮಾಹಿತಿಗಳ ಕುರಿತು ಸಿಬಿಐ ತನಿಖೆ ಅಗತ್ಯವಿದ್ದರೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಯಾರನ್ನೋ ಹೇಳಿ, ಕೇಳಿ ಅವರು ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಆದಾಯ ತೆರಿಗೆ ಅಧಿಕಾರಿಗಳು ಹಣ ಯಾರಿಗೆ ಸಂಬಂಧಪಟ್ಟಿದೆ ಎಂಬುದನ್ನು ಅಗತ್ಯ ಸಂದರ್ಭಗಳಲ್ಲಿ ಬಹಿರಂಗ ಪಡಿಸುತ್ತಾರೆ. ತನಿಖೆ ನಡೆಯುತ್ತಿರುವ ಕಾರಣದಿಂದ ಇದುವರೆಗೂ ಮಾಹಿತಿ ಹೊರ ಬಂದಿಲ್ಲದಿರಬಹುದು. ಹಲವಾರು ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ಅಗತ್ಯ ಮಾಹಿತಿ ನೀಡುತ್ತಾರೆ.
ಅಧಿಕೃತ ಮಾಹಿತಿ ಪ್ರಕಟವಾಗದ ಹೊರತು ಹಣ ಅವರಿಗೆ ಸೇರಿದೆ, ಇವರಿಗೆ ಸೇರಿದೆ ಎಂದು ಊಹೆ ಮಾಡಿ ತೇಜೋವಧೆ ಮಾಡುವುದು ಸರಿಯಲ್ಲ. ಪ್ರಕರಣದಲ್ಲಿ ಗಂಭೀರತೆ ಇದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು. ಬಳಿಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್-ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಭೇಟಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿತಿಸಿದ ಅವರು ತಮಗೆ ಈ ಬಗ್ಗೆ ಮಾಹಿತಿ ಇಲ್ಲ. ವಿದೇಶ ಪ್ರವಾಸಕ್ಕೆ ತೆರಳಿದ್ದ ತಾವು ನಿನ್ನೆ ರಾತ್ರಿಯಷ್ಟೆ ರಾಜ್ಯಕ್ಕೆ ವಾಪಸ್ ಆಗಿದ್ದೇನೆ. ಯಾವ ವಿಚಾರಗಳು ಗೊತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು, ಬಿಜೆಪಿ ನಾಯಕರು ಭೇಟಿ ಮಾಡಿರುವ ಬಗ್ಗೆ ನನಗೆ ತಿಳಿದಿಲ್ಲ ಎಂದರು.