ಬೆಂಗಳೂರು:ಉಪಚುನಾವಣೆ ಬಹಳ ಗಂಭೀರವಾದದ್ದು, ಇದು ರಾಜ್ಯದ ಭವಿಷ್ಯ ನಿರ್ಧರಿಸಲಿದೆ ಎಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ 15 ಕ್ಷೇತ್ರಗಳ ಚುನಾವಣೆಯಲ್ಲ. ಕಳೆದ ನಾಲ್ಕೈದು ತಿಂಗಳಿಂದ ನೋಡಿದ್ದೀರಾ. ಯಡಿಯೂರಪ್ಪ ಸಮ್ಮಿಶ್ರ ಸರ್ಕಾರ ಕೆಡವಿದ್ರು. ಶಾಸಕರನ್ನ ಕೊಂಡು ಸರ್ಕಾರ ರಚಿಸಿ, ಉತ್ತಮ ಆಡಳಿತ ಕೊಡ್ತಾರೆ ಅಂದುಕೊಂಡಿದ್ದೆವು. ಆದರೆ, ಅವರು ಸರ್ಕಾರ ಹೇಗೆ ನಡೆಸುತ್ತಿದ್ದಾರೆ...? ಪ್ರವಾಹ ಸಂತ್ರಸ್ಥರನ್ನ ಹೇಗೆ ನೋಡಿಕೊಳ್ತಿದ್ದಾರೆ ಎಂಬುದು ಕಣ್ಣಿಗೆ ಕಾಣುತ್ತಿದೆ ಎಂದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿ. ಪರಮೇಶ್ವರ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಮಾತನಾಡಿ, ಉಪ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಂದರೆ ಎರಡು ಆಯ್ಕೆಗಳಿವೆ. ಒಂದು ಜೆಡಿಎಸ್ ಜೊತೆ ಹೋಗಬಹುದು. ಅವಕಾಶ ಸಿಗದಿದ್ದರೆ ಮಧ್ಯಂತರ ಚುನಾವಣೆಗೆ ಹೋಗಬಹುದು. ಹೀಗಾಗಿ ಅವಕಾಶಗಳು ಮುಕ್ತವಾಗಿವೆ. ಆದರೆ ಇಲ್ಲಿ ಕೂತು ನಾವು ತೀರ್ಮಾನಿಸೋಕೆ ಆಗಲ್ಲ. ನಮ್ಮ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದರು.
ಸಿದ್ದರಾಮಯ್ಯ ಏಕಾಂಗಿಯಾಗಿಲ್ಲ. ಅವರು ಏಕಾಂಗಿಯಾಗೋಕೆ ನಾವು ಬಿಡಲ್ಲ. ನಾವೆಲ್ಲರೂ ಅವರ ಜೊತೆಯೇ ಇದ್ದೇವೆ. ನನಗೆ ಆರೋಗ್ಯದಲ್ಲಿ ಸ್ವಲ್ಪ ಸಮಸ್ಯೆಯಿತ್ತು. ಹೀಗಾಗಿ ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಳ್ಳಲಿಲ್ಲ. ವೈದ್ಯರು ವಿಶ್ರಾಂತಿ ಪಡೆಯಿರಿ ಅಂದಿದ್ದರು. ಆದರೂ ಹುಣಸೂರಿಗೆ ರೈಲಿನಲ್ಲೇ ಹೋಗಿ ಪ್ರಚಾರ ಮಾಡಿದ್ದೆ. ನಾವೆಲ್ಲರೂ ಸಿದ್ದರಾಮಯ್ಯನವರ ಜೊತೆಯೇ ಇದ್ದೇವೆ ಎಂದು ಹೇಳಿದರು.