ಬೆಂಗಳೂರು: ನಾಳೆಯಿಂದ ಬೆಂಗಳೂರಿನಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಹಾಗೂ ಡಿಜಿಟಲ್ ಎಕಾನಮಿ ಮಿನಿಸ್ಟರ್ಸ್ ನಾಲ್ಕನೇ ಸಭೆ ನಡೆಯಲಿದ್ದು, ಸಭೆ ಸೇರಲಿರುವ ತಾಜ್ ವೆಸ್ಟ್ಎಂಡ್ ಹೋಟೆಲ್ ಸುತ್ತಮುತ್ತಲಿನ ಪ್ರದೇಶವನ್ನು 'ತಾತ್ಕಾಲಿಕ ಹಾರಾಟ ನಿಷಿದ್ಧ ವಲಯ' ಎಂದು ಘೋಷಿಸಿ ಹಾಗೂ ನಿಷೇಧಾಜ್ಞೆ ವಿಧಿಸಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಆದೇಶಿಸಿದ್ದಾರೆ.
ಆಗಸ್ಟ್ 16 ರಿಂದ 20ರ ವರೆಗೂ ಸಭೆ ನಡೆಯಲಿದ್ದು, ಸಾಕಷ್ಟು ವಿದೇಶಿ ಪ್ರತಿನಿಧಿಗಳು, ವಿವಿಐಪಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸುರಕ್ಷತಾ ಕ್ರಮವಾಗಿ ಆಗಸ್ಟ್ 15ರ ಬೆಳಗ್ಗೆ 8 ರಿಂದ ಆಗಸ್ಟ್ 20ರ ಮದ್ಯಾಹ್ನ 2 ಗಂಟೆಯವರೆಗೆ ಹೋಟೆಲ್ ಸುತ್ತಮುತ್ತಲಿನ 1 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಡ್ರೋನ್, ಮಾನವರಹಿತ ವೈಮಾನಿಕ ವಾಹನ, ಗ್ಲೈಡರ್, ಲಘು ವಿಮಾನ, ಪೂರ್ವ ನಿಗದಿಯಾಗದ ಎಲ್ಲಾ ರೀತಿಯ ಲಘು ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಭಾರತಕ್ಕೆ ಜಿ20ಯ ಅಧ್ಯಕ್ಷತೆ ದೊರೆತಿದೆ. ಇದರ ನಂತರ ಭಾರತ ನಾನಾ ಕಡೆಗಳಲ್ಲಿ ಜಿ20 ಶೃಂಗಸಭೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಒಂದು ವರ್ಷಗಳ ಕಾಲ ಭಾರತದ ಬಳಿ ಈ ಅಧ್ಯಕ್ಷತೆ ಇರಲಿದೆ. ನವೆಂಬರ್ 16 ರಂದು ಇಂಡೋನೇಷ್ಯಾದ ಬಾಲಿಯಲ್ಲಿ ಅಲ್ಲಿನ ಅಧ್ಯಕ್ಷ ಜೋಕೊ ವಿಡೋಡೊ ಅವರು ಜಿ 20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸಿದರು.