ಬೆಂಗಳೂರು:''ದೇಶದಲ್ಲಿ ಜಿ-20 ಸಭೆಗಳು ನಡೆಯುತ್ತಿವೆ. ವಿಜಯನಗರದ ಹಂಪಿಯಲ್ಲಿ ಜುಲೈ 13ರಿಂದ 16ರವರೆಗೆ ಸಭೆ ನಡೆಯಲಿದೆ'' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಶುಕ್ರವಾರ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿದ ನಂತರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಜಿ-20 ಸಭೆಯಲ್ಲಿ 33 ದೇಶಗಳ ಮುಖ್ಯಸ್ಥರ ಪ್ರಿನ್ಸಿಪಲ್ ಅಡ್ವೈಸರ್ಗಳು ಭಾಗಿಯಾಗುತ್ತಾರೆ. ಸಚಿವರು, ಅಧಿಕಾರಿಗಳು ಇದರಲ್ಲಿ ಇರಲಿದ್ದಾರೆ. ಆ ಸಭೆಯ ಸಿದ್ಧತೆಗಳ ಪರಿಶೀಲನೆಗಾಗಿ ಪೂರ್ವಭಾವಿ ಸಭೆ ಮಾಡಿದ್ದೇವೆ. ಪ್ರವಾಸೋದ್ಯಮ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಎಡಿಜಿಪಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ'' ಎಂದರು. ''ರಸ್ತೆ, ಮೂಲಸೌಕರ್ಯ ಅಭಿವೃದ್ಧಿ, ವಸತಿ, ನಮ್ಮ ಸಂಸ್ಕೃತಿ ಪ್ರದರ್ಶನಗಳ ಚರ್ಚೆ. ನಾಳೆಯಿಂದ ಯುದ್ಧೋಪಾದಿಯಲ್ಲಿ ಕೆಲಸ ಮಾಡಲಾಗುತ್ತದೆ. ಅಂತಾರಾಷ್ಟ್ರೀಯ ಕಾರ್ಯಕ್ರಮ ಇದಾಗಿರುವುದರಿಂದ ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಲಿದೆ'' ಎಂದು ಹೇಳಿದರು.
47.66 ಕೋಟಿ ರೂಪಾಯಿ ವೆಚ್ಚ:''ವಿರೂಪಾಕ್ಷ ದೇವರ ದೇವಸ್ಥಾನದಿಂದ ಹಿಡಿದು ಆನೆಗುಂದಿ, ವೀರಾಪುರಗಡ್ಡಿ, ಚಕ್ರತೀರ್ಥ, ಕೋದಂಡರಾಮ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನ, ಪುರಂದರ ಮಂಟಪ, ಹಂಪಿ ವಿವಿಯ ಚಟುವಟಿಕೆಗಳ ಪರಿಚಯ, ನಮ್ಮ ಸಂಸ್ಕೃತಿ ಪ್ರತಿಬಿಂಬಿಸುವ, ಪ್ರಾಚೀನ ಆಕರ್ಷಣೀಯ ಸ್ಥಳ ನೋಡುವ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಅಂದಾಜು 47.66 ಕೋಟಿ ರೂ. ವೆಚ್ಚವಾಗಲಿದೆ'' ಎಂದರು.
''ಆಗಸ್ಟ್ 1, 2ಕ್ಕೆ ಮೈಸೂರು, ಆಗಸ್ಟ್ 16-18 ಬೆಂಗಳೂರು, ಆಗಸ್ಟ್ 19ರಂದು ಬೆಂಗಳೂರಿನಲ್ಲಿ ಜಿ-20ಗೆ ಸಂಬಂಧಿಸಿದ ವಿವಿಧ ಸಭೆಗಳು ನಡೆಯಲಿವೆ. ಇಲ್ಲಿಗೆ ಬರುವ ಪ್ರತಿನಿಧಿಗಳಿಗೆ ನಮ್ಮ ಸಂಸ್ಕೃತಿ, ಪರಂಪರೆ ತಿಳಿಸಲು, ಪ್ರದರ್ಶಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ದೇಶದ ಗೌರವದ ಪ್ರಶ್ನೆ, ಟೀಮ್ ಇಂಡಿಯಾ, ಟೀಮ್ ಕರ್ನಾಟಕ ಕಲ್ಪನೆಯಲ್ಲಿ ಕರ್ನಾಟಕದ ಹಿರಿಮೆ ತೋರಿಸುತ್ತೇವೆ'' ಎಂದು ಮಾಹಿತಿ ನೀಡಿದರು.
ಸರ್ಕಾರ ದಿವಾಳಿ ಆಗುತ್ತದೆ ಎನ್ನುವುದು ಭ್ರಮೆ:''ಬಡವರ ಕಲ್ಯಾಣ ಮಾಡಿದರೆ, ಸರ್ಕಾರ ದಿವಾಳಿ ಆಗುತ್ತದೆ ಎನ್ನುವ ಭ್ರಮೆಯಲ್ಲಿ ಇರುವವರಿಗೆ ಒಂದು ವರ್ಷದ ನಂತರದ ನಿರಾಶೆ ಆಗಲಿದೆ. ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಆಗುತ್ತಿಲ್ಲ ಎಂಬುದು ಸುಳ್ಳು. ಸುಮ್ಮನೆ ಜನರ ಸಮಯವನ್ನು ಬಿಜೆಪಿ ಹಾಳು ಮಾಡುತ್ತಿದೆ'' ಎಂದು ವಾಗ್ದಾಳಿ ನಡೆಸಿದರು.
ಜಿಎಸ್ಟಿ ಸಭೆ:ತಪ್ಪು ಮಾಹಿತಿ ಕೊಡುವವರಿಗೆ ಕಾನೂನಿನ ಸಡಿಲಿಕೆ ಸಾಧ್ಯವಿಲ್ಲ. ಆರ್ಥಿಕ ಇಲಾಖೆ ಪುನರ್ ಪರಿಶೀಲಿಸಲು ಸೂಚಿಸಿದೆ. ಮುಂದಿನ ವಾರದ ವೇಳೆಗೆ ಮತ್ತೆ ಸಭೆ ನಡೆಯಲಿದೆ ಎಂದರು. ಜಿಎಸ್ಟಿ ವಂಚಿಸಿದ ಬಗ್ಗೆ ಆರೋಪ ಮಾಡಿದವರೇ ಸಾಕ್ಷ್ಯ ಒದಗಿಸಬೇಕು ಎಂಬ ನಿಯಮ ಸರಿಯಲ್ಲ. ಈ ಸಡಿಲಿಕೆಯನ್ನು ತೆಗೆಯಬೇಕು. ಉದ್ದಿಮೆದಾರನ ಜಿಎಸ್ಟಿ ಮಾಹಿತಿಯನ್ನು ಆತನ ಕನ್ಸಂಟ್ ಇಲ್ಲದೆ ಪಡೆಯುವಂತಾಗಬೇಕು. ಪಾರದರ್ಶಕ ಇರಬೇಕು. ಇದಕ್ಕಾಗಿ ನಿಯಮ ತಿದ್ದುಪಡಿ ಆಗಬೇಕೆಂದು ಶಿಫಾರಸು ಮಾಡಲು ಪ್ರಯತ್ನ ಮಾಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು. ಆರ್ಟಿಐ ಅಡಿಯಲ್ಲಿ ಈ ಮಾಹಿತಿಗಳು ಲಭ್ಯವಿದೆ. ಆದರೂ ಅಗತ್ಯ ದಾಖಲೆ ಮತ್ತು ಮಾಹಿತಿಗಾಗಿ ಸರಳೀಕರಣ ವಿಧಾನ ರೂಪಿಸುವ ಬಗ್ಗೆಯೂ ಚೆರ್ಚೆ ನಡೆಸಿದ್ದೇವೆ ಎಂದರು.
ಇದನ್ನೂ ಓದಿ:General Transfers: 2023-24ರ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿ ಜೂ.30ಕ್ಕೆ ವಿಸ್ತರಣೆ